Sunday, March 05, 2017

ಕನ್ನಡದಲ್ಲಿ ಡಬ್ಬಿಂಗ್ . . .

ಮತ್ತೆ ಶುರುವಾಗಿದೆ ಡಬ್ಬಿಂಗ್ ಡಿಸ್ಕಶನ್. ಇದು ಯಾವಾಗ ಶುರು ಆಗುತ್ತೋ ಯಾವಾಗ ಮುಗಿದು ಹೋಗುತ್ತದೋ ಗೊತ್ತೇ ಆಗಲ್ಲ. "ಇಲ್ಲೊಂದು ಸಮಸ್ಯೆ ಖಂಡಿತಾ ಇದೆ" ಅನ್ನೋದು ಮತ್ತೊಮ್ಮೆ ಈ ಚರ್ಚೆ ಶುರುವಾದಾಗಲೇ. ಮೊನ್ನೆ ನ್ಯೂಸ್ ನೋಡ್ತಾ ಇದ್ದೆ. ಎಂದಿನ "ಕನ್ನಡದ ರಕ್ಷಕರ" ಜೊತೆಗೂಡಿ ನವರಸ ನಾಯಕ ಜಗ್ಗೇಶ್ ಬಬ್ರುವಾಹನನಾಗೇ ಅಬ್ಬರಿಸಿ ಬೊಬ್ಬಿರಿತಾ ಜೈಲಿಗೆ ಹೋದರು ಸರಿ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಕ್ಕೂ ಸರಿ ಎನ್ನುತ್ತಿದ್ದರು. ಇಷ್ಟು ಬಾರಿ ಈ ಚರ್ಚೆ ಪ್ರಸ್ತುತಕ್ಕೆ ಬಂದರೂ ಬಡಪಾಯಿಗಳಾದ ನಮನ್ನು ಅಂದರೆ ವೀಕ್ಷಕರನ್ನುನಿಮಗೇನು ಬೇಕ್ರಪ್ಪ ಅಂತ ಕೇಳೋ ಸೌಜನ್ಯ ಸಹ ಮಾಧ್ಯಮಗಳಿಗಿಲ್ಲ. ಸರಿ ಅವರು ಕೆಳದಿದ್ದರೇನಂತೆ ನಮ್ಮ ಮುಕ್ತ ಅಭಿಪ್ರಾಯವನ್ನು ತಿಳಿಸಲು ಸಾಮಾಜಿಕ ಜಾಲತಾಣಗಳಿವೆಯಲ್ಲ.



ನಾನು ಈ ವಿಷಯವನ್ನು ಮೂರು ವಿಭಾಗಗಳಾಗಿ ನೋಡಲು ಇಚ್ಛಿಸುತ್ತೇನೆ.
1. ಕನ್ನಡದ ಅಳಿವು ಉಳಿವು
2. ಸ್ಪರ್ಧಾತ್ಮಕತೆ
3. ಹಕ್ಕು

1. ಕನ್ನಡದ ಅಳಿವು ಉಳಿವು:
ಮೊದಲಿಗೆ ಡಬ್ಬಿಂಗ್ ಇಂದ ಕನ್ನಡಕ್ಕೆ ತೊಂದರೆ. ಇದು ಕನ್ನಡದ ಅಳಿವು ಉಳಿವಿನ ಪ್ರಶ್ನೆ ಎಂಬ ಭಾವನಾತ್ಮಕ ವಾದವನ್ನು ಚಿತ್ರರಂಗದವರು ಬಿಡಬೇಕು ಎನ್ನುವುದು ನನ್ನ ಪ್ರಾರ್ಥನೆ. ಇದು ಕೇವಲ ಚಿತ್ರರಂಗದ ಸಮಸ್ಯೆ. ಇದಕ್ಕೂ ಭಾಷೆಗೂ ಯಾವುದೇ ನಂಟಿಲ್ಲ. ಚಲನಚಿತ್ರಗಳ ಮೂಲಕ ಭಾಷೆಯ ಮೌಲ್ಯವನ್ನು ಹೆಚ್ಚಿಸುತ್ತಿದ್ದ ಅಂಶ ವರನಟ ರಾಜ್ ಕುಮಾರ್ ಅವರೊಂದಿಗೆ ಮಣ್ಣಾಗಿ ಹೋಯಿತು. ಈಗ ಚಲನಚಿತ್ರರಂಗ ಉಳಿದವುಗಳಂತೆ ಒಂದು ಉದ್ಯಮ. I might sound harsh but i feel it is the reality.

ಕನ್ನಡದ ನಟ ನಟಿಯರಿಗೆ ಕನ್ನಡಿಗರಿಗೆ ಸಿಗುತ್ತಿರುವ ಮನೋರಂಜನೆ ಅದರಿಂದಾಗುತ್ತಿರುವ ಬೌದ್ಧಿಕ ಪರಿಣಾಮಗಳ ಅರಿವಿದ್ದಿದ್ದರೆ ಇಷ್ಟು ದಿನಗಳಲ್ಲಿ ಒಬ್ಬರಾದರು ನಮ್ಮ ಕಿರುತೆರೆಯಲ್ಲಿ ಬರುತ್ತಿರುವ ಅಷ್ಟ ದರಿದ್ರ ಧಾರಾವಾಹಿಗಳ ಬಗ್ಗೆ ಚಕಾರವೆತ್ತಿರಬೇಕಿತ್ತು ಅಲ್ಲವೇ. ಮನೆಯಲ್ಲಿಯೇ ಕೊಲೆಗಡುಕಿ ಇದ್ದರು ಯಾರಿಗೂ ತಿಳಿಯದಿರುವ ಧಾರವಾಹಿ ಒಂದಾದರೆ . . . ಇನ್ನು ಮೂರರಲ್ಲಿ ಭೂತ ಪ್ರೇತ ಆತ್ಮ . . . ಒಂದು ಸೀರಿಯಲ್ ಅವರು ಬರೋದು ಮದ್ವೆ ಮಾಡ್ಸೋದು ಮತ್ತೊಂದು ಅದೇ ಕಥೆಯ ಧಾರವಾಹಿ . . . ದೇವ್ರೇ ಕಾಪಾಡಬೇಕು ಇವುಗಳನ್ನು ನೋಡುವ ನಮ್ಮ ತಾಯಂದಿರನ್ನು. ಪಾಪ ಆ ಪ್ರಾಣೇಶ್ ಬಡ್ಕೊಂಡ್ ಬಡ್ಕೊಂಡ್ ಸುಸ್ತಾಗಿರ್ಬೇಕು ಈ ಧಾರಾವಾಹಿಗಳ ಬಗ್ಗೆ .ಕೊನೆಗೆ ಸೀತಾರಾಮ್ ಸೇತುರಾಂ ಅವರುಗಳನ್ನು ಮನೆಗೆ ಕಳುಹಿಸಿ ಈಗ ಹಿಂದಿ ಇಂದ ಧಾರಾವಾಹಿಗಳನ್ನು ರಿಮೇಕ್ ಮಾಡುತ್ತಿದ್ದಾರೆ ನಮ್ಮ ದಿಗ್ಗಜರುಗಳು !!!
ಮಾಲ್ಗುಡಿ ಡೇಸ್, ಗುಡ್ಡದ ಭೂತ, ಗೃಹ ಭಂಗ, ಮಾಯಾಮೃಗ, ಮನ್ವಂತರ ಇಂತಹ ಧಾರಾವಾಹಿಗಳು ಬರುತ್ತಿದ್ದ ನಮ್ಮ ಕಿರುತೆರೆ ಈಗ ತಿಪ್ಪೆಗುಂಡಿ. ಮೊದಲು ಸರ್ಕಾರದವರು ಈ ಮೆಗಾ ಧಾರಾವಾಹಿಗಳಿಗೆ ಎರಡು ಇಲ್ಲ ಮೂರು ವರ್ಷಗಳ ಗರಿಷ್ಟ ಮಿತಿ ಇಡುವ ಕಾನೂನು ಒಂದನ್ನು ತರಬೇಕು. ಏನ್ ಜನ ನೋಡ್ತಾರೆ ಅಂತ ಎಳೆದಿದ್ದು ಎಳೆದಿದ್ದೇ.

ಇದು ಚಿತ್ರರಂಗದ ತೊಂದರೆಯಲ್ಲ ಕಿರುತೆರೆಯದು ಅನ್ನುವುದಾದರೆ ಡಬ್ಬಿಂಗ್ ನಿಂದ ಕನ್ನಡಕ್ಕೆ ಹಾನಿ ಅನ್ನುವುದನ್ನು ನಿಲ್ಲಿಸಿ.

2. ಸ್ಪರ್ಧಾತ್ಮಕತೆ:
ಒಬ್ಬ ಸಾಫ್ಟ್ವೇರ್ ಉದ್ಯೋಗಿ ಕೇವಲ ಭಾರತವಲ್ಲ ಜಗತ್ತಿನಲ್ಲಿರುವ ಅನೇಕರೊಂದಿಗೆ ಸೆಣೆಸಿ ಜಯಿಸಬೇಕಾಗುತ್ತದೆ. ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಅಲ್ಲಿರುವ ಸ್ಪರ್ಧಾತ್ಮಕತೆ ಅಪಾರ.
ಆಗಿರುವಾಗ ನಮ್ಮ ಚಲನಚಿತ್ರರಂಗದವರಿಗೆ ಕೇವಲ ಕನ್ನಡದ ಉದ್ಯಮ ಮಾತ್ರ ಏಕೆ ಸವಾಲಿನ ಕ್ಷೇತ್ರವಾಗಿರಬೇಕು. ಅವರುಗಳು ಬೇರೆಯವರೊಂದಿಗೆ ಸ್ಪರ್ಧೆಗಿಳಿದು ನಮ್ಮ ಸಾಮರ್ಥ್ಯ ತೋರಿಸುವುದು ಯಾವಾಗ .
ಇನ್ನು ಎಷ್ಟು ದಿನ ಹೀಗೆ ಸವಾಲಿಗೆ ಬೆನ್ನುತೋರಿಸುವುದು.
ನಮ್ಮ ರಂಗಿತರಂಗ, ಗೋಧಿ ಬಣ್ಣ ಯಾವುದಕ್ಕೂ ಕಮ್ಮಿ ಇರಲಿಲ್ಲ ಅಲ್ಲವೇ. ರಿಮೇಕ್ ಗಳಿಗೆ ಕಡಿವಾಣ ಹಾಕದಿದ್ದರೆ ನಮ್ಮ ಸೃಜನಾತ್ಮಕ ಮಂದಿ ಯಾವಾಗ ಹೆಚ್ಚೆಚ್ಚು ಅವಕಾಶಗಳು ದೊರೆಯುವುದು.
ಕೆಲಸ ಸಿಗಲಿ ಎಂಬ ಏಕೈಕ ಉದ್ದೇಶದಿಂದ ಚಲನಚಿತ್ರಗಳು ಮಾಡುವುದಾದರೆ  ಚಲನಚಿತ್ರರಂಗ ಸಹ MGNREGA scheme ಅಲ್ಲವೇ .
ಸುಮ್ಮನೆ ನಮ್ಮ ಹೀರೋಗಳು ಬಡ ಕಾರ್ಮಿಕರ ಹೆಸರು ಹೇಳಿಕೊಂಡು ರಿಮೇಕ್ ಮಾಡುತ್ತಿದ್ದಾರೆ ಅಷ್ಟೇ. ಉದಯ್-ಅನಿಲ್ ಸಾವು ನೋಡಿದರೆ ತಿಳಿಯುತ್ತದೆ ನಮ್ಮ ದೊಡ್ಡ ಮಂದಿಗೆ ಕಾರ್ಮಿಕರ ಮೇಲಿನ ಕಾಳಜಿ.

3. ಹಕ್ಕು:
ಅಲ್ಲ ಸ್ವಾಮಿ ಇವರುಗಳು ತಮ್ಮ ಕುಟುಂಬ ಸಮೇತಾರಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಯಾವುದೇ ಭಾಷೆಯ ಯಾವುದೇ ಚಲನಚಿತ್ರವನ್ನು ನೋಡಬಹುದು. ಆದರೆ ಆ ಭಾಷೆ ಬರದಿರುವ ಬಡಪಾಯಿ ಆ ಚಿತ್ರವನ್ನು ಕನ್ನಡದಲ್ಲಿ ನೋಡಬಾರದು ಎನ್ನಲು ಇವರಿಗೇನು ಹಕ್ಕಿದೆ. ನಮ್ಮ ಹಳ್ಳಿಯ ಪುಟಾಣಿಗಳೇಕೆ The Jungle Book, Ice Age ಚಿತ್ರಗಳನ್ನು ನೋಡಬಾರದು. ಇವುಗಳನ್ನು ನಮ್ಮವರು ರಿಮೇಕ್ ಮಾಡಬಲ್ಲರೇ. ನಮ್ಮವರು ಏಕೆ Discovery, Animal Planet, National Geography ಈ ಚಾನೆಲ್ ಕಾರ್ಯಕ್ರಮಗಳನ್ನು ನೋಡಬಾರದು ಹೇಳಿ.

ಮೇಲೆ ಹೇಳಿರುವ ಎಲ್ಲ ಕಾರಣಗಳಿಂದಾಗೇ #ISupportDubbinginKannada.
 

Saturday, January 21, 2017

ಕಾಂಗರೂ ದ್ವೀಪ

ಅದೃಷ್ಟವೋ ಪರಿಶ್ರಮವೋ ಕೆಲವೊಮ್ಮೆ ಐ.ಟಿ ಉದ್ಯೋಗಿಗಳಿಗೆ ವಿದೇಶಗಳನ್ನು ನೋಡುವ, ಅಲ್ಲಿನ ಜನ, ಅವರ ಸಂಸ್ಕೃತಿ,ಅವರ ಜೀವನ ಶೈಲಿ ತಿಳಿಯುವ ಅವಕಾಶ ದೊರಕುತ್ತದೆ. ಪರಿಶ್ರಮ ಹಾಗೂ ಅದೃಷ್ಟದ ಸಮ್ಮಿಳಿತವೆಂಬಂತೆ ಕಳೆದ ವರ್ಷ ವಿಶ್ವದ ದಕ್ಷಿಣ ಖಂಡ ಆಸ್ಟ್ರೇಲಿಯದಲ್ಲಿ ಕೆಲಸ ಮಾಡುವ ಸದಾವಕಾಶ ನನ್ನದಾಗಿತ್ತು. ಅಷ್ಟು ದೂರ ಹೋದಮೇಲೆ ಅಲ್ಲಿನ ಪ್ರಸಿದ್ದ ಸ್ಥಳಗಳನ್ನು ನೋಡದಿದ್ದರೆ ಹೇಗೆ ಅಲ್ಲವೇ. ಜಗದ್ವಿಖ್ಯಾತ ಸಿಡ್ನೀಯ ಹೊಸ ವರ್ಷದ ಸಂಭ್ರಾಮಚರಣೆ - Fire Works, ಮೆಲ್ಬೌರ್ನ್ನ The Great Ocean Road, Grampians ಹೀಗೆ ಹಲವಾರು ಜಾಗಗಳನ್ನು ನೋಡಿದ್ದರೂ, ಇನ್ನೂ ಕಣ್ಣ ಮುಂದೆ ಜೀವಂತವಾಗಿರುವ, ನೆನೆದಾಗಲೆಲ್ಲಾ ಮನಸ್ಸಿಗೆ ಮುದ ನೀಡುವುದು ಕಾಂಗರೂ ನಾಡಿನ ಆ ಪುಟ್ಟ ದ್ವೀಪ - The Kangaroo Island.

Kangaroo Island ಅಸ್ತ್ರಲಿಯಾದ ಮೂರನೇ ದೊಡ್ಡ ದ್ವೀಪ. South Austrlaiaದ ರಾಜಧಾನಿ ಆಡೆಲೇಡ್ ನಿಂದ ನೈಋತ್ಯಕ್ಕೆ ಸುಮಾರು ೭೦ ಮೈಲಿ ದೂರದಲ್ಲಿದೆ ಕಾಂಗರೂ ದ್ವೀಪ. ಸ್ಥಳೀಯ ವನ್ಯಜೀವಿ, ಅಗಾದವಾದ ಕರಾವಳಿ, ಅತ್ಯಂತ ಕಡಿಮೆ ಜನಸಂದಣಿ, ರಮಣೀಯ ಪ್ರಕೃತಿ ಇವೆಲ್ಲವುಗಳಿಂದ ತುಂಬಿದ ಪ್ರಾಕೃತಿಕ ಸ್ವರ್ಗ ಈ ದ್ವೀಪ. ಅದರ ಕಚ್ಚಾತನವೇ - Rawness ಅದಕ್ಕೆ ಭೂಷಣ.

ಮುಂಗಡವಾಗಿಯೇ ಎಲ್ಲ ಬುಕಿಂಗ್ಸ್ ಮಾಡಿಕೊಂಡು ಒಂದು ವಾರಾಂತ್ಯ ಕಾಂಗರೂ ದ್ವೀಪ ನೋಡಲು ತಯಾರಾದೆವು. ನಾನು, ಗೆಳಯ ಭರಣಿಧರನ್, ಗೆಳೆಯ ಚಂದನ್ ಹಾಗೂ ಚಂದನ್ ನ ಪತ್ನಿ ಪ್ರತಿಚಿ - ನಾಲ್ವರು. ಭರಣಿಧರನ್ ನ ಕಾರು. ನಮಗೆ ಎಲ್ಲಿಗೆ ಹೋಗಬೇಕಾದರೂ ಹೊಟ್ಟೆಯ ಚಿಂತೆಯಂತೂ ಇದ್ದೇ ಇರುತ್ತದೆ. ಆಸ್ಟ್ರೇಲಿಯದಲ್ಲಿದ್ದರೇನು ಸ್ವಲ್ಪ Indianness ಇರಲಿ ಎಂದು ಚಿತ್ರಾನ್ನ, ಚಪಾತಿಯನ್ನು ಮಾಡಿಕೊಂಡೆವು. ಎರಡು ದಿನ ಬರೀ ಬರ್ಗರ್ಗಳನ್ನೇ ತಿನ್ನುವಬದಲು ನಾವೇ ಏನಾದರೂ ಮಾಡಿಕೊಂಡರೆ ಹೊಟ್ಟೆಗೂ ಹಿತ ಜೇಬಿಗೂ ಮಿತ ಎಂಬ ಆಲೋಚನೆ ;)



ಒಂದೂವರೆ ಗಂಟೆ ಪ್ರಯಾಣದ ನಂತರ Cape Jervis ತಲುಪಿದೆವು. ಈ Cape Jervis ನಿಂದ ಸರಿಸುಮಾರು ೪೦ ನಿಮಿಷ Ferry ಯಲ್ಲಿ ಪಯಣಿಸಿದರೆ ಕಾಂಗರೂ ದ್ವೀಪ. Sea Link Ferry ತನ್ನ ಎದುರಾಗುತ್ತಿದ್ದ ದೊಡ್ಡ ದೊಡ್ಡ ಅಲೆಗಳನ್ನು ಸೀಳಿ ಮುನ್ನೆಡೆದು ನಮನ್ನು Penneshaw ತಲುಪಿಸಿತ್ತು. Penneshaw - ಕಾಂಗರೂ ದ್ವೀಪದ ಮೊದಲ ತುದಿ.

Kingscote ಎಂಬಲ್ಲಿ Central Backpackers ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದೆವು. ಈ backpackers ಕಾನ್ಸೆಪ್ಟ್ ಒಂತರಾ ವಿಶೇಷ. Common Hostel ಅನ್ನಬಹುದು. ಒಂದರ ಮೇಲೊಂದು ಹೊಂದಿಸಿರುವ Double Decker Bed, Bathroom, ಒಂದು ಅಡಿಗೆಮನೆ, ಲಿವಿಂಗ್ ಏರಿಯಾ, ಹೊರಾಂಡವಿರುತ್ತದೆ. This is Cheap and also Best. ಇಲ್ಲಿ ತುಂಬಾ ಇಷ್ಟವಾದ ವಿಷಯವೇನೆಂದರೆ ಯಾವುದೇ ಕಾವಲುಗಾರ ಅಲ್ಲಿರಲಿಲ್ಲ. ನಮ್ಮ ಹೆಸರಲ್ಲಿ ಒಂದು ಸ್ವಾಗತ ಟಿಪ್ಪಣಿ ಹಾಗೆ ರೂಂಗಳ ಕೀಲಿ ಕೈ ಇಟ್ಟಿದ್ದರು. ಸ್ಥಳೀಯ ಹವಾಮಾನ, ಜಾಗಗಳು, ವಿಸಿಷ್ಟತೆಗಳನ್ನು ಚಿತ್ರಿಸಿದ ಒಂದು ಕ್ರಿಯೇಟಿವ್ ಬ್ಲ್ಯಾಕ್‌ಬೋರ್ಡ್ ಅಲ್ಲಿತ್ತು. ಸ್ವಲ್ಪ ಫ್ರೆಶ್ ಅಪ್ ಆಗಿ, ತಂದಿದ್ದ ತಿಂಡಿ ತಿಂದು ನಮ್ಮ ಪ್ರವಾಸ ಆರಂಭಿಸಿದೆವು.



ಮೊದಲಿಗೆ Kangaroo Island Wildlife Park - Parndanaಕ್ಕೆ ಹೋದೆವು. ಇದೊಂತರಾ ನಮ್ಮ Zoo ಇದ್ದಹಾಗೆ. ಇಲ್ಲಿ ಕಾಂಗರೂಗಳಿಗೆ ಕಾಳು ಕಡಿ ತಿನ್ನಿಸಬಹುದು. ಇಲ್ಲಿದ್ದ ಕಾಂಗರೂಗಳು ಒಂತರಾ ನಮ್ಮಲ್ಲಿ ಹಸುವಿನ ಕರು ಇದ್ದ ಹಾಗೆ. ಅದರ ಬಳಿ ಹೋದರೆ ತನ್ನ ಎರಡು ಕೈಗಳಿಂದ ನಮ್ಮ ಕೈಯನ್ನು ಬಿಗಿಯಾಗಿ ಇಡಿದಿಟ್ಟುಕೊಂಡು ನನ್ನ ಕೈಯಲ್ಲಿದ್ದ ಎಲ್ಲವನ್ನೂ ತಿನ್ನುತ್ತಾ ಕಚಗುಳಿ ಇಡುತ್ತಿತ್ತು. ಇಲ್ಲಿ ಮಾತನಾಡುವ ಸುಂದರವಾದ ಬಣ್ಣ ಬಣ್ಣದ ಗಿಳಿಗಳು ಕೂಡ ಇದ್ದವು. ಇಲ್ಲಿಂದ ಮುಂದೆ ದ್ವೀಪದ ಆಕರ್ಷಣೀಯ ಸ್ಥಳಗಳಾದ The Remarkable Rocks ಹಾಗೂ The Admirals Arch ಕಡೆ ನಡೆದೆವು. Information Guideಗಳ ಮೇಲೆ ಪ್ರಕಟವಾಗಿದ್ದ ಆ ಫೋಟೋಸ್ ಎಷ್ಟು ಆಕರ್ಷಿಸುತ್ತಿದವು ಎಂದರೆ, ನಾವು ಸಹ ಇಂತಹುದೇ ಸಮಯದಲ್ಲಿ ಈ ಜಾಗಗಳನ್ನು ನೋಡಬೇಕೆಂದೆಣಿಸಿ ಸೂರ್ಯಾಸ್ತಮಾನದ ಸಮಯಕ್ಕೆ ತಲುಪಿದೆವು. ಕೋಟ್ಯಂತರ ವರ್ಷಗಳ ಗಾಳಿ, ಮಳೆ, ಸವೆತ ಇನ್ನೂ ಹಲವಾರು ನೈಸರ್ಗಿಕ ಕ್ರಿಯೆಗಳಿಂದ ಈ ಶಿಲೆಗಳು ರೂಪಗೊಂಡಿವೆ. ಅಷ್ಟು ಪ್ರಸಿದ್ದ ಸ್ಥಳವಾದರೂ ನಮ್ಮ ಅದೃಷ್ಟವೆಂಬಂತೆ ಹತ್ತು ಜನ ಸಹ ಅಲ್ಲಿರಲಿಲ್ಲ.

Admirals Arch

Remarkable Rocks


ಆ ತಂಪಾದ ಇಳಿ ಸಂಜೆ, ಭೋರ್ಗರೆಯುತ್ತಾ ಬಂಡೆಗಪ್ಪಳಿಸುತ್ತಿದ್ದ ಅಲೆಗಳು, ಪಡುವಣದಲ್ಲಿ ಲೀನವಾಗುತ್ತಿದ್ದ ಸೂರ್ಯ, ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸುತ್ತಿದ್ದ ಬಾನು, ಅಲ್ಲಿದ್ದ ಶಾಂತತೆ, ಆ ನಿಶಬ್ದ ಎಷ್ಟು ಬಣ್ಣಿಸಿದರೂ ಸಾಲದು. ಇನ್ನೂ ಆ ಅಲೆಗಳು ಸದ್ದು ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಜೀವನದಲ್ಲಿ ಮೊದಲ ಸಲ ಶಾಂತತೆಯಲ್ಲಿ, ನಿಶಬ್ದದಲ್ಲಿ ಈ ಮಟ್ಟಿನ ಸುಖವಿದೆ ಅನ್ನಿಸಿದ್ದು ಅಂದೇ.  That Silence was mesmerizing !!! It was magical !!!
ಆ ಸಂಜೆ ಏಕೆ ಜಾರುತ್ತಿತ್ತೋ . . . ಸದ್ದಿಲ್ಲದಂತೆ ಏಕೆ ಸಾಗುತ್ತಿತ್ತೋ . . .



ನಮ್ಮನ್ನು ಸ್ವಾಗತಿಸಲೆಂದೇ ಕಾಯುತಿದ್ದ ಹಾಗೆ ರಸ್ತೆಯ ಇಕ್ಕೆಲಗಳ್ಳಲ್ಲಿ ಪುಟ್ಟ ಪುಟ್ಟ ಕಾಂಗರೂಗಳು Wallabies ನಿಂತಿದ್ದವು. ಆಗಲೇ ಕತ್ತಲಾದ್ದರಿಂದ ಬಹಳ ನಿಧಾನವಾಗಿ ಕಾರು ಚಲಾಯಿಸಬೇಕು ಇಲ್ಲವಾದರೆ ಎಷ್ಟು ಪುಟ್ಟ ಪುಟ್ಟ wallabies ಗಳು ಕಾರಿನ ಆಡಿಸಿಕ್ಕು ಸಾಯುತ್ತವೋ ಎಂಬ ಹೊಣೆಗಾರಿಕೆ ನಮ್ಮ ಮೇಲಿತ್ತು. ಬೆಳಿಗ್ಗೆ ಇಂದ ಒಂದು ಕಾಂಗರೂ ರಸ್ತೆಯಲ್ಲಿ ಕಾಣುತ್ತಿಲ್ಲವಲ್ಲ ಎಂಬ ನಮ್ಮ ಕೊರಗು ನೀಗಿತ್ತು. ಸುಮಾರು ಐವತ್ತು ಕಾಂಗರೂಗಳನ್ನು ನೋಡಿದೆವು. ಕೆಲವು ರಸ್ತೆಯ ಬದಿಯಲ್ಲೇ ನಿಂತಿದ್ದರೆ, ಕೆಲವು ಕಾರಿನ ಎದುರಿಗೆ ಹಾರಿ ಆ ಕಡೆ ಇಂದ ಈ ಕಡೆ ಹೋಗುತ್ತಿದ್ದವು. ಎರಡು ಕಾಂಗರೂ ಮಾತ್ರ ನಮ್ಮ ಫೋಟೋ ತೆಗೆಯಿರಿ ಎಂಬಂತೆ ರಸ್ತೆಯ ಮಧ್ಯೆಯೇ ನಿಂತು ಪೋಸ್  ಕೊಟ್ಟವು. Special Thanks to those two Kangaroos !!!



ದಟ್ಟವಾದ ಆ ಕಾಡಿನ ಮಧ್ಯೆ ನಮ್ಮ ಕಾರನ್ನು ಸ್ವಲ್ಪ ಬದಿಯಲ್ಲಿ ನಿಲ್ಲಿಸಿ ಆಕಶದೆಡೆ ದಿಟ್ಟಿಸಿದರೆ ಆಹಾ ಅದೊಂದು ವಿಹಂಗಮ ದೃಶ್ಯಕಾವ್ಯ. ಆ ಮಟ್ಟಿನ ದಟ್ಟವಾದ ನಕ್ಷತ್ರ ಪುಂಜವನ್ನು ನಾನೆಂದೂ ನೋಡಿರಲಿಲ್ಲ; ಮಾಲಿನ್ಯವಿಲ್ಲದಿದ್ದ ಕಾರಣವೋ, ದಕ್ಷಿಣ ಧ್ರುವಕ್ಕೆ ಸಾಮೀಪ್ಯವಿದ್ದಿದ್ದರಿಂದ ಇರಬಹುದೇನೋ. ಖಗೊಳದಲಿದ್ದ ಅಲ್ಪ ಸ್ವಲ್ಪ ಜ್ಞಾನದಿಂದ ಕೆಲವು Constellations ಗಳನ್ನು ಗುರುತಿಸಿ, ಗೆಳೆಯರಿಗೆ ತೋರಿಸಿ, ಹಿಗ್ಗಿ ಹೀರೆಕಾಯಿಯಾಗಿ ಸಂತೋಷದಿಂದ Backpackers ಕಡೆ ನಡೆದೆವು. ಆ ಚಳಿಯ ರಾತ್ರಿಯಲ್ಲಿ Backpackersನಲ್ಲಿದ್ದ ವಿದೇಶಿಗರು ವೈನ್ ಹೀರುತ್ತಿದ್ದರೆ ನಾವು ಮ್ಯಾಗಿ ಮಾಡಿ ತಿಂದೆವು.

ಮರುದಿನ Seal Bay, Kelli Hill Caves, Emu Bay ಗಳನ್ನು ಸಂದರ್ಶಿಸಿದೆವು. ಈ ಸೀಲ್ಗಳು ನ್ಯೂ ಸೀಲ್ಯಾಂಡ್ನಿಂದ  ನೂರಾರು ಕಿಲೋ ಮೀಟರ್ ಪ್ರಯಾಣಿಸಿ ಬರುತ್ತವಂತೆ. ಒಮ್ಮೆ ಮಲಗಿದರೆ ವಾರಗಟ್ಟಲೆ ಇವು ಏಳುವುದಿಲ್ಲ ಎಂಬ ಮಾಹಿತಿಗಳ್ಳನ್ನು ತಿಳಿದುಕೊಂಡೆವು. ಕೆಲ್ಲಿ ಹಿಲ್ ಕೇವ್ಸ್ ಗಳ್ಳಲ್ಲಿ ನೈಸರ್ಗಿಕವಾಗಿ ಮೂಡಿರುವ ಡೆಕೊರೇಶನ್ಸ್ - ಚೂಪು ಚೂಪಾದ ಕಲ್ಲಿನ ಆಕಾರ, ಅವುಗಳ ಉಧ್ಭವಕ್ಕೆ ಕಾರಣವಾದ ವಿಜ್ಞಾನ ನಮ್ಮ ಜ್ಞಾನವನ್ನು ಹೆಚ್ಚಿಸಿತ್ತು. ಕೊನೆಯಲ್ಲಿ Emu Bay ಯಲ್ಲಿ ಸ್ವಲ್ಪ ಕ್ರಿಕೆಟ್ ಆಡಿ, ಸಮುದ್ರಕ್ಕೆ ಜಿಗಿದು, ಉಲ್ಲಾಸಿತಗೊಂಡು ಆಡೆಲೇಡ್ ಕಡೆ ಹೆಜ್ಜೆ ಇಟ್ಟೆವು.

ಇವತ್ತಿಗೂ ಟೈಮ್ಸ್ ನೌ ಚಾನಲ್ನಲ್ಲಿ ಆಗ್ಗಾಗ್ಗೆ ಬರುವ Visit South Australia ಎಂಬ ಜಾಹೀರಾತು ನೋಡಿದಾಗಲ್ಲೆಲ್ಲಾ ಕಾಂಗರೂ ನಾಡಿನ ಆ ಪುಟ್ಟ ದ್ವೀಪ ಕಣ್ಣ ಮುಂದೆ ಪ್ರತ್ಯಕ್ಷವಾಗುತ್ತದೆ.

ಎಷ್ಟೇ ವರ್ಷಗಳೂ ಕಳೆದರೂ ಆ ಸೊಬಗು, ಆ ನಿಸರ್ಗ, ಆ ವನ್ಯತೇ, ಆ ಮನೋಹರತೆ ಹಾಗೇ ಇರಲಿ ಎಂಬ ಆಸೆ.

ಹಾಗೆಯೇ ನಮಲ್ಲಿರುವ ಪ್ರವಾಸೋದ್ಯಮ ಸಾಮರ್ಥ್ಯ ಮನಗಾಣುವ ಶಕ್ತಿ ನಮ್ಮನ್ನಾಳುವ ಸರ್ಕಾರಗಳಿಗೆ, ಹೋಗುವ ಪ್ರತಿಯೊಂದು ಜಾಗ ನಮ್ಮದೇ ಊರು, ನಮ್ಮದೇ ಮನೆ ಎಂಬ ತಿಳುವಳಿಕೆ ನಮ್ಮಲ್ಲಿ ಮೂಡಲಿ ಎಂಬ ಆಶಯ.

 

Saturday, October 10, 2015

ಬಯಲುಸೀಮೆ ಬವಣೆ ಹಾಗೂ ಎತ್ತಿನಹೊಳೆ . . .

ಯಾವುದೇ ವಿಚಾರವಾಗಲಿ ಅಲ್ಲಿ ಪರ-ವಿರೋಧದ ಕೂಗು ಇರಬೇಕು. ಆಗಲೇ ಆ ವಿಚಾರದ ಸಾಧಕ-ಬಾದಕ ಅರಿವು ಮೂಡುವುದು. ಅದೇ ನಮ್ಮ ಪ್ರಜಾಪ್ರಭುತ್ವದ ತಳಹದಿಯೂ ಹೌದು. ವಿರೋಧವೇ ಇಲ್ಲ ಎನ್ನುವುದಾದರೆ ನಮಗೂ ಕಮ್ಯುನಿಷ್ಟರಿಗೂ ವ್ಯತ್ಯಾಸವೇ. ಇರುವುದಿಲ್ಲ. ಸಂಸದರ ಸಂಬಳ ಹೆಚ್ಚಳವಾಗಿರಬಹುದು, ಮೋದಿ ಸರ್ಕಾರದ ಕಾರ್ಯಕ್ರಮಗಳಿರಬಹುದು, ಪ್ರಶಸ್ತಿಯ ವಿಚಾರಗಳಾಗಿರಬಹುದು ಪರ-ವಿರೋಧಗಳಿರಬೇಕು; ಚರ್ಚೆಗಳಿಗೆ ವೇದಿಕೆಗಳು ನಿರ್ಮಾಣವಾಗಬೇಕು. ಆಗಲೇ ನಮ್ಮ ಆಲೋಚನೆ,ಚಿಂತನೆ,ಜ್ಞಾನ ಹೆಚ್ಚುವುದು. ಆದರೆ ನಮ್ಮ ದೇಶದಲ್ಲಿ ಚರ್ಚೆಗಳೇ ಆಗುವುದಿಲ್ಲ. ಜನರನ್ನು ಭಾವನಾತ್ಮಕವಾಗಿ ಎತ್ತಿಕಟ್ಟುವ ಕೆಲಸ ಮಾತ್ರ ನೆಡೆಯುತ್ತದೆ. ಅದು ಕಾವೇರಿಯಾಗಲಿ, ನೇತ್ರಾವತಿಯಾಗಲಿ, ಕಳಸ-ಬಂಡೂರಿಯಾಗಲಿ ಎಲ್ಲವೂ ಅಷ್ಟೇ.

ಮಾರ್ಚ್ 3 2014 ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಆಗಿತ್ತು.  ಕಾರಣ: "ಎತ್ತಿನಹೊಳೆ" ಎಂಬ ಯೋಜನೆಯ ಶಿಲಾನ್ಯಾಸ.
ಯಾವ ಜಿಲ್ಲೆಗಳಿಗೆ ಇದು ನೀರಾವರಿ ಯೋಜನೆ ಎಂದು ಹೇಳಲಾಗುತ್ತಿತ್ತೋ ಅಲ್ಲೂ ಸಹ ಪ್ರತಿಭಟನೆಗಳು ಜರುಗಿದವು; ಕಾರಣ: "ಪರಮಶಿವೈಯ್ಯ ವರದಿಯ" ಶಾಶ್ವತ ನೀರಾವರಿ ಯೋಜನೆ ಜಾರಿಯಾಗಬೇಕು ಎಂಬ ಹೋರಾಟ.

ಈಗ ಮತ್ತೆ ಒಂದೂವರೆ ವರ್ಷಗಳ ನಂತರ ಕರವಾಳಿಯಲ್ಲಿ ಎತ್ತಿನಹೊಳೆ ಯೋಜನೆಯ ವಿರೋಧದ ಕೂಗು ಹೆಚ್ಚುತ್ತಿದೆ.
ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರೋಧದ ಪೋಸ್ಟ್ಗಳನ್ನು ನೋಡುತ್ತಿದ್ದೇನೆ.
ಕರಾವಳಿಗರು ಹೇಳುತ್ತಿರುವುದು: ಎತ್ತಿನಹೊಳೆ ಯೋಜನೆ ನೇತ್ರಾವತಿ ತಿರುವು ಯೋಜನೆಯ ಮತ್ತೊಂದು ಹೆಸರು ಅಥವಾ ಅದರ ಮುನ್ನುಡಿ. ಇದರಿಂದ ಪಶ್ಚಿಮ ಘಟ್ಟಗಳ ಸಸ್ಯ ಸಂಕುಲ, ಜೀವ ರಾಶಿಯ ಮೇಲೆ ಅಗಾಧ ಪರಿಣಾಮವಾಗುತ್ತದೆ.
ಮಳೆ ಕಡಿಮೆಯಾಗುತ್ತದೆ, ಸಮುದ್ರದ ನೀರು ಹಿಂದೆ ಸರಿದು ಉಪ್ಪು ನೀರು ಬಾವಿ, ಜಮೀನುಗಳಿಗೆ ನುಗ್ಗುತ್ತದೆ ಇದರಿಂದ ನಮ್ಮ ಜೀವನ ಬರಡಾಗುತ್ತದೆ ಎಂದು.
 
ಆದರೆ ಬಯಲು ಸೀಮೆಯ ಎತ್ತಿನಹೊಳೆ ಯೋಜನೆಯ ಪ್ರತಿಪಾದಕರು ಹೇಳುವುದು: ಎತ್ತಿನಹೊಳೆ ನೇತ್ರಾವತಿ ತಿರುವು ಯೋಜನೆಯಲ್ಲ. ನೇತ್ರಾವತಿಯ ಉಪನದಿಗಳಾದ ಎತ್ತಿನಹೊಳೆ, ಕಾಡುಮನೆ ಹೊಳೆ, ಕೆರಿಹೊಳೆ, ಹೊಂಗಡ ಹಳ್ಳ ಇವುಗಳಿಂದ ಮಳೆಗಾಲದ ನೂರು ದಿನಗಳಲ್ಲಿ ಉಪಲಬ್ದವಾಗುವ ನೀರಿನ ಪ್ರಮಾಣದಲ್ಲಿ ಶೇಕಡಾ ಐವತ್ತರಾಷ್ಟನ್ನು
ಕೊಳವೆಗಳ ಮೂಲಕ ರೈಲು ಮಾರ್ಗದ ಪಕ್ಕದಲ್ಲಿ ಬಯಲುಸೀಮೆಗೆ ಸಾಗಿಸುವುದು.  

ನನ್ನ ಕರವಾಳಿಯ ಮಿತ್ರರೇ ಐದು ವರ್ಷದಿಂದ ಮಂಗಳೂರಿನಲ್ಲಿ ಜೀವಿಸಿದ್ದೇನೆ. ಹರಿಯುವ ನೇತ್ರಾವತಿಯನ್ನು ಕಂಡು ಆನಂದಿಸ್ಸಿದ್ದೇನೆ. ಮಳೆಗಾಲದಲ್ಲಿ ಸುರಿವ ಮಳೆಯ ಪ್ರಮಾಣವನ್ನು ಬಲ್ಲೆ. ಯೋಜನೆಗೆ ನಿಮ್ಮ ವಿರೋಧ ಸಹಜವಾದದ್ದೇ. ಸರ್ಕಾರ ನಿಮ್ಮನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು. ಆಗಂತ ದಯವಿಟ್ಟು ಇಪ್ಪತ್ನಾಲ್ಕು ಟಿಎಂಸಿ ಯ ಎತ್ತಿನಹೊಳೆ ಯೋಜನೆಗೆ ವಿರೋಧಿಸಲು ನಾಲ್ಕುನೂರಾ ಇಪ್ಪತ್ತು ಟಿಎಂಸಿ ಯ ನೇತ್ರಾವತಿಯನ್ನು ಮರುಭೂಮಿಯಂತೆ ಚಿತ್ರಿಸಿ ಮಾತ್ರ ಪ್ರತಿಭಟನೆ ಮಾಡದಿರಿ. ಅದು ನಿಮ್ಮ ಭೌದ್ದಿಕ ಮಟ್ಟಕ್ಕೆ ತಕ್ಕದಾದುದ್ದಲ್ಲ. ಯಾವುದೇ ಸರ್ಕಾರ ತಮ್ಮಿಂದ ಕಿತ್ತುಕೊಂಡು ಬಯಲುಸೀಮಿಗೆ ಕೊಡುವ ಧೈರ್ಯ ಮಾಡುವುದಿಲ್ಲ. ಮತ್ತೆ ಚುನಾವಣೆ ಬಂದೆ ಬರುತ್ತದೆ. ರಾಜಕಾರಣಿಗಳು ನಿಮ್ಮನ್ನು ಎದುರಿಸಲೇ ಬೇಕು. ಆ ಅರಿವು ಅವಿರಿಗಿಲ್ಲವೇ. ಸನ್ಮಾನ್ಯ ಯು . ಟಿ . ಖಾದರ್ ರವರೆ, ಒಂದು ಎತ್ತಿನಹೊಳೆ ವಿಫಲ ಯೋಜನೆ ಎಂಬ ಸ್ಟ್ಯಾಂಡ್ ತಗೆದುಕೊಳ್ಳಿ ಇಲ್ಲ ಸಫಲ ಯೋಜನೆಯಾಗಬಹುದು ಎಂದು ಹೇಳಿ. ದಯಮಾಡಿ ಇದು ಹೊರಟಿರುವ ಬಸ್ಸು ನಿಲ್ಲಿಸಲಾಗುವುದಿಲ್ಲ ಎಂಬ ಅಡ್ಡ ಮಾತು ಮಾತ್ರ ಬೇಡ. ನಿಮ್ಮಂತಹ ಪ್ರಾಮಾಣಿಕ ರಾಜಕಾರಣಿಗೆ ಅದು ಸರಿ ಹೊಂದುವುದಿಲ್ಲ.

ಇನ್ನು ಬಯಲು ಸೀಮೆಯ ಶಾಶ್ವತ ನೀರಾವರಿ ಹೋರಾಟಗಾರರು ಹೇಳುವುದು: ಜಿ ಎಸ್ ಪರಮಶಿವಯ್ಯ ವರದಿಯ ಪ್ರಕಾರ ಪಶ್ಶಿಮ ಘಟ್ಟದಲ್ಲಿ ಸರಿಸುಮಾರು ಮೂರುಸಾವಿರ ಟಿಎಂಸಿ ನೀರಿದ್ದೂ ಅದರಲ್ಲಿ ಬಳಕೆ ಆಗುತ್ತಿರುವ ಮುನ್ನೂರು ಟಿಎಂಸಿ ನೀರನ್ನು ಬಿಟ್ಟು ಉಳಿದ ಎರಡು ಸಾವಿರದ ಏಳ್ನೂರು ಟಿಎಂಸಿ ನೀರನ್ನು ಬಯಲುಸೀಮಿಗೆ ಹರಿಸಿ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತನ್ನಿ ಎನ್ನುವುದು. ಇಪ್ಪತ್ನಾಲ್ಕು ಟಿಎಂಸಿಯ ಕುಡಿಯುವ ನೀರಿನ ಎತ್ತಿನಹೊಳೆ ಯೋಜನೆಗೆ ಸಹಮತ ಮೂಡಿಲ್ಲ ಇನ್ನೂ ಶಾಶ್ವತ ಹೋರಾಟದ ಅನುಷ್ಟಾನ ಅದು ಕನಸ್ಸೇ ಸರಿ !!!

ಅಲ್ಲ ಸ್ವಾಮಿ ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಅಳಿಯಲು ಬಿಳಿಗುಂದಲು  ಎಂಬ ಸ್ಥಳದಲ್ಲಿ ಕೇಂದ್ರವೊಂದಿದೆ. ಅಂತದೆ ಒಂದು ಕೇಂದ್ರವನ್ನು ಪಶ್ಚಿಮ ಘಟ್ಟದ ಒಂದು ಸ್ಥಳದಲ್ಲಿ ಏಕೆ ಸ್ಥಾಪಿಸಬಾರದು. ಆಗಲಾದ್ರೂ ಪ್ರೊಫೆಸ್ಸೊರ್ಗಳ ಅಂದಾಜಲ್ಲದೆ ಸರಿಯಾದ ಅಂಕಿ ಅಂಶ ಸಿಗುತ್ತದೆ ತಾನೇ. ಪರಮಶಿವಯ್ಯ ವರದಿ ಇಂದ ಪಶ್ಚಿಮ ಘಟ್ಟಕ್ಕೆ ಹಾನಿಯಾಗುವುದು ಎಂದರೆ ಬೇರೆ ಮಾರ್ಗಗಳನ್ನು ಹುಡುಕಿ. ಇಲ್ಲ ಹಾನಿ ಇಲ್ಲದೆಯೇ ಗುರುತ್ವಾಕರ್ಷಣೆಯಿಂದ ನೀರು ತರುತ್ತೇವೆ ಎನ್ನುವುದಾದರೆ ಕರಾವಳಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಒಟ್ಟಿನಲ್ಲಿ ಏನಾದರೂ ಮಾಡಿ.

ನೀರಿನ ಬವಣೆ ಬಯಲುಸೀಮೆಯವರಿಗಿಂತ ಚೆನ್ನಾಗಿ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವೇ ಇಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಜಿಲ್ಲಾವಾರು ಸಂಖ್ಯೆ ನೋಡಿದರೆ ತಿಳಿಯುತ್ತದೆ. ಒಂದೇ ದಿನ 1000 ಅಡಿಗಳ ಐದಾರು ಕೊಳವೆ ಬಾವಿಗಳನ್ನು ತೊಡಿಸಿ ಒಂದರಲ್ಲೂ ಒಂದನಿ ನೀರು ಸಿಗದೆ ಲಕ್ಷಗಟ್ಟಲೆ ಹಣ ಕಳೆದುಕೊಂಡ ರೈತರುಗಳು, ನೀರಿಲ್ಲದೆ ಐವತ್ತು ನೂರು ಎಕರೆ ಜಮೀನಿದ್ದು ಬೆಂಗಳೂರಿನಲ್ಲಿ ಕೆಲಸಕ್ಕೆ ಬಂದ ರೈತರುಗಳು, ಮೇವಿಲ್ಲದೆ ಸಾಯುವ ಜಾನುವಾರುಗಳನ್ನು ಕಾಣುವ ರೈತನಿಗಿಂತ, ಮನೆಯಲ್ಲಿ ನೀರು ಕಾಯಿಸಿದಾಗ ಫ್ಲೋರಾಯ್ಡ್ ಅಂಶದಿಂದ ಬೆಳ್ಳನೆ ಪದರ ಗಟ್ಟಿದ ಪಾತ್ರೆಯ ನೋಡುವ ತಾಯಿಗಿಂತ, ಹಳ್ಳಿಯಲ್ಲಿದ್ದು ದುಡ್ಡು ಕೊಟ್ಟು ಟ್ಯಾಂಕರ್ ಗಳಿಂದ ಬೋರೆವೆಲ್ಲ್ ನೀರನ್ನು ಪಡೆಯುತ್ತಿರುವವರಿಗಿಂತ  ಮತ್ತ್ಯಾರು ಶಾಶ್ವತ ನೀರಾವರಿಯ ಯೋಜನೆಯ ಮಹತ್ವ ಅರಿಯಲಾರರು . . .

ಅಲ್ಲೆಲ್ಲೋ ಗುಜರಾತಿನಲ್ಲಿ ಸತ್ತಿದ ನದಿಯ ಜೀರ್ಣೋದ್ಧಾರವಾಗಿದೆಯಂತೆ. ಕೊಳವೆಗಳಲ್ಲಿ ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ನೀರರಿದು ಕೃಷಿ ಬೆಳೆಯುತ್ತಿದೆ ಅಂತೆ. ಆದರೆ ನಮಲ್ಲಿ ಇಪ್ಪತ್ತು ವರ್ಷದ ಹಿಂದ ಪರಮಶಿವಯ್ಯ ವರದಿ ಇನ್ನೂ ವರದಿಯಾಗಿಯೇ ಉಳಿದುಕೊಂಡಿದೆ.  ಸರ್ಕಾರಗಳು ಹೋಗುತ್ತಿವೆ ಬರುತ್ತಿವೆ, ಜಲಸಂಪನ್ಮೂಲ ಇಲಾಖೆ ಬೇರೆ ಖೇಡು.
ಇವರುಗಳು ಯೋಚಿಸುವ ಹೊತ್ತಿಗೆ ನೂರಾರು ಕೋಟಿಗಳಲ್ಲಿ ಮುಗಿಯುವ ಯೋಜನೆಗಳು ಲಕ್ಷಕೋಟಿ ಯೋಜನೆಗಳಾಗಿರುತ್ತವೆ.

ನನ್ನೂರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಗ್ರಾಮ. ನಮ್ಮ ಕಷ್ಟಗಳು ಪರಿಹಾರವಾಗಬೇಕೆಂದರೆ ಭದ್ರಾ ಮೇಲ್ದಂಡೆ ಮುಗಿಯಬೇಕು. ಅದಿನ್ನಾವ ದಶಕಕ್ಕೋ. ನನ್ನೂರಿಗೂ ಎತ್ತಿನಹೊಳೆ ಯೋಜನೆಗೂ ಯಾವುದೇ ಸಂಭಂದ ಇಲ್ಲ. ಆದರೂ ಒಬ್ಬ ಬಯಾಸೀಮಿಗನಾಗಿ . . . .

ತನ್ನ ಮಹತ್ವಾಕಾಂಕ್ಷೆ ಯೋಜನೆಗಳೊಂದಿಗೆ ಮೋದಿ ಅಟಲ್ ರ ಕನಸ್ಸಿನ "ನದಿ ಜೋಡಣೆ" ಯೋಜನೆಯನ್ನು ಕೈಗೆತ್ತಿಕೊಂಡರೆ . . .  ತಮ್ಮ ಎಂದಿನ ಮಸಾಲೆ ಹಾಗೂ ಋಣಾತ್ಮಾಕ ವಿಷಯಗಳ ಜೊತೆ ಇಂತಹ ವಿಷಯಗಳನ್ನು ಚರ್ಚಿಸಲು ಒಮ್ಮತ ಮೂಡಿಸಲು ಮಾಧ್ಯಮಗಳು ವೇದಿಕೆ ನಿರ್ಮಿಸುವ ಸಾಮಾಜಿಕ ಕಳಕಳಿ ತೋರ್ಪಡಿಸಿದರೆ  . . .

Sunday, January 25, 2015

ಗಣರಾಜ್ಯೋತ್ಸವ . . .

ಐತಿಹ್ಯ: ಸರಿ ಸುಮಾರು ೩೦೦ ವರ್ಷಗಳ ದಾಸ್ಯದಿಂದ ಮುಕ್ತಿಯೇನೋ ದೊರಕಿತ್ತು ಆದರೆ ದೇಶದ "ಆಡಳಿತ" ಎನ್ನುವ ಬಹುದೊಡ್ಡ ಸವಾಲು ಭಾರತೀಯರ ಮುಂದಿತ್ತು. ಸ್ವಾತಂತ್ರ್ಯ ಪಡೆದರೆ ಸಾಕಿರಲಿಲ್ಲ ಪಡೆದ ಸ್ವಾತಂತ್ರ್ಯದ ಗೌರವ ರಕ್ಷಣೆ ನಮ್ಮ ಹೊಣೆಯಾಗಿತ್ತು. ಜಗತ್ತಿನೆದುರಿಗೆ ತಲೆ ಎತ್ತಿ ನಿಲ್ಲಬೇಕಾದ ಅನಿವಾರ್ಯತೆ ನಮಗಿತ್ತು. ಅಸಂಖ್ಯಾತ ಭಾಷೆ, ಹಲವು ಧರ್ಮ, ಸಾವಿರಾರು ಜಾತಿ-ಉಪಜಾತಿ, ವರ್ಣ ವ್ಯವಸ್ಥೆ, ಅನೇಕ ಸಂಸ್ಕೃತಿ, ಹಲವು ಸಂಪ್ರದಾಯ ಆಚರಣೆಗಳು - ಇಂತಹ ಹತ್ತುಹಲವು ಭಿನ್ನತೆಗಳು . . . ಬಡತನ, ಅನಕ್ಷರತೆಯಂತಹ ಶಾಪಗಳು . . . ಇಂತಹ ಸ್ಥಿತಿಯಲ್ಲಿದ್ದ ದೇಶದ ಮಂದಿಯನ್ನು ಒಂದೇ ಆಡಳಿತಕ್ಕೆ, ಒಂದೇ ವ್ಯವಸ್ಥೆಗೆ, ಒಂದೇ ಶಿಸ್ತಿಗೆ ಒಗ್ಗೂಡಿಸುವುದು ಸಾಮಾನ್ಯದ ಕೆಲಸವಾಗಿರಲ್ಲಿಲ್ಲ . ಆಗ ಹುಟ್ಟಿದ್ದೇ ಭಾರತದ ಸಂವಿಧಾನ.
ಎಷ್ಟೇ ಭಿನ್ನತೆ ಇದ್ದರೂ ನಾವು ನಡೆದುಕೊಳ್ಳಬೇಕಾದಂತಹ ಪರಿ, ನಮ್ಮ ತತ್ವ,ನಮ್ಮಆದರ್ಶ,ನಮ್ಮ ಸರಿ-ತಪ್ಪುಗಳನ್ನು ನಿರ್ಣಯಿಸುವುದರ ಮೂಲವಾಯ್ತು ಈ ಸಂವಿಧಾನ. ನಮ್ಮ ಕಾನೂನು, ನಮ್ಮ ವ್ಯವಸ್ಥೆ, ನಮ್ಮ ಸರ್ಕಾರ, ನಮ್ಮ ಆಡಳಿತಕ್ಕೆ ಬುನಾದಿಯಾಯ್ತು ಈ ಸಂವಿಧಾನ.
 
 
ಸಂವಿಧಾನ ಯಾರೋ ಜಾರಿಗೆ ತಂದದ್ದಲ್ಲ, ಅದು ನಮಗೆ ನಾವೇ ಹಾಕಿಕೊಂಡ ಶಿಸ್ತಿನ ಕೋಟೆ. ನಮ್ಮ ಮುನ್ನೆಡೆಗೆ,ಶಾಂತಿ ಸುವ್ಯವಸ್ಥೆಗೆ ಅಂತಹ ಅಗತ್ಯತೆ ನಮಗೆ ಅನಿವಾರ್ಯವಾಗಿತ್ತು. ನಮ್ಮ ಸಂವಿಧಾನ ಜಾರಿಗೆ ಬಂದಂತಹ ದಿನವೇ ಈ ಗಣರಾಜ್ಯೋತ್ಸವ.
ಸಂವಿಧಾನವನ್ನು ಜಾರಿಗೆ ತಂದದ್ದಷ್ಟೆ ನಮ್ಮ ಹೆಮ್ಮೆಯಲ್ಲ. ಇಂದಿಗೂ ಅದನ್ನು ಕೋಟಿ ಕೋಟಿ ಭಾರತೀಯರು ಶಿರಸಾವಹಿಸಿ ಪಾಲಿಸುತ್ತಿದ್ದೇವೆ. ನಮಗೆ ನಾವೇ ಬೆನ್ನು ತಟ್ಟಿಕೊಳ್ಳಬೇಕಾದ ಸಂಗತಿ ಇದು. ಅಂತಹ ಭೌದ್ದಿಕ ಪ್ರೌಡಿಮೆ ನಮಲ್ಲಿರದಿದ್ದರೆ ನೆರೆ ರಾಷ್ಟ್ರಗಳಲ್ಲಿ ನೋಡಸಿಗಬಹುದಾದಂತಹ ಅರಾಜಕತೆ ನಮ್ಮಲಿಯೂ ಇರುತ್ತಿತ್ತು. ಯಾರೋ ಸೈನ್ಯದ ಮುಖ್ಯಸ್ಥ, ಯಾರೋ ರಾಜಕೀಯ ಮುಖಂಡ ನಾನೇ ಈ ರಾಷ್ಟ್ರದ ಅಧಿಪತಿ ಎನ್ನಲು ಭಾರತದಂತಹ ಧೀಮಂತ, ಪ್ರಜಾಸತಾತ್ಮಕ ದೇಶದಲ್ಲಿ ಸಾಧ್ಯವೇ !!! ಜನವರಿ ೨೬ ಕೇವಲ ಸಂವಿಧಾನ ಜಾರಿಗೆ ಬಂದಿದ್ದರ ಸಂಭ್ರಮಾಚರಣೆಯಲ್ಲ, ನನ್ನ ಅಭಿಪ್ರಾಯದಲ್ಲಿ ನಾವು ನಮ್ಮ ವ್ಯವಸ್ಥೆಯನ್ನು, ನಮ್ಮ ಸಂವಿಧಾನವನ್ನು ಗೌರವಿಸುತ್ತೇವೆ ಎನ್ನುವ ಸಂಕೇತವೂ, ಹೆಮ್ಮೆಯ ಆಚರಣೆಯೂ ಹೌದು.
 
ಆಚರಣೆ: ಕೇಬಲ್ ಕ್ರಾಂತಿ(ಭ್ರಾಂತಿ)ಯ ನಂತರ ವರ್ಷದ ಯಾವ ದಿನ ಡಿಡಿ ನ್ಯಾಶನಲ್ ನೋಡುತ್ತೇನೆಯೋ ಗೊತ್ತಿಲ್ಲ ಆದರೆ ಆಗಸ್ಟ್ ೧೫,ಜನವರಿ ೨೬ ಹಾಗೂ ನಮ್ಮ ಜಂಬೂ ಸವಾರಿಯ ನೇರಪ್ರಸಾರವನ್ನು ಡಿಡಿ-೧ರಲ್ಲೇ ನೋಡುವುದು. ಪ್ರತಿವರ್ಷ ಜನವರಿ ೨೬ರಂದು ರಾಜಪಥದಲ್ಲಿ ನಡೆಯುವ ಭಾರತದ ಗಣರಾಜ್ಯೋತ್ಸವ ಆಚರಣೆ ನೋಡುವುದೇ ಒಂದು ಹೆಮ್ಮೆ !!! ಪ್ರತಿವರ್ಷವೂ ದಟ್ಟ ಮಂಜಿನ ಕಾರಣ ಕಾರ್ಯಕ್ರಮ ಆರಂಭವಾಗುವುದೇ ಬೆಳಿಗ್ಗೆ ೯-೯:೩೦ರ ಆಸುಪಾಸಿಗೆ . . . ಗಣರಾಜ್ಯೋತ್ಸವ ಕೇವಲ ಸಾಂಕೇತಿಕ ಆಚರಣೆಯಲ್ಲ. ಆ ದಿನ ಹಗಲು ರಾತ್ರಿಯೆನ್ನದೆ ನಮ್ಮ ರಕ್ಷಣೆಯೇ ತಮ್ಮ ಪರಮ ಧ್ಯೇಯವೆಂದು ನಮನ್ನು ಕಾಪಾಡುತ್ತಿರುವ ಸೈನಿಕರಿಗೆ ನಾವುಗಳು ಗೌರವ ಅರ್ಪಿಸುವ ದಿನ. ಹೌದು ವಿಧ್ಯುಕ್ತವಾಗಿ ಕಾರ್ಯಕ್ರಮ ಆರಂಭವಾಗುವ ಮೊದಲು, ಸೈನ್ಯದ ಮೂರು ವಿಭಾಗಗಳ ಮುಖ್ಯಸ್ಥರು, ರಕ್ಷಣಾ ಸಚಿವಾಲಯದ ರಾಜ್ಯ ಮಂತ್ರಿ, ರಕ್ಷಣಾ ಮಂತ್ರಿ ಹಾಗೂ ದೇಶದ ಪ್ರಧಾನ ಮಂತ್ರಿ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ನಲ್ಲಿ ನಮ್ಮೆಲ್ಲರ ಪರವಾಗಿ ಗೌರವ ಸಲ್ಲಿಸುತ್ತಾರೆ.
 
 
ಇದಾದ ನಂತರ ಉಪರಾಷ್ಟಪತಿ ಒಳಗೊಂಡತೆ ಎಲ್ಲ ಪ್ರಮುಖರು ದ್ವಜಾರೋಹಣ ನಡೆಯುವ ಸ್ಥಳಕ್ಕೆ ಆಗಮಿಸುತ್ತಾರೆ. ನಂತರ ನಮ್ಮ ದೇಶದ ಪ್ರಥಮ ಪ್ರಜೆ,ನಮ್ಮ ಸೈನ್ಯದ ದಂಡ ನಾಯಕ, ನಮ್ಮ ರಾಷ್ಟಪತಿ ದಿನದ ಮುಖ್ಯ ಅತಿಥಿಯೊಂದಿಗೆ ತಮ್ಮ ಅಶ್ವಾರೋಹಿ ಬೆಂಗಾವಲು ಪಡೆಯ ರಕ್ಷಣೆಯಲ್ಲಿ ಆಗಮಿಸುತ್ತಾರೆ. ನಂತರ ದ್ವಜಾರೋಹಣ. ರಾಷ್ಟ್ರಗೀತೆ ಮೊಳಗುತ್ತಿದ್ದರೆ ಅದರ ಹಿಮ್ಮೇಳದಲ್ಲಿ ಕುಶಾಲ ತೋಪುಗಳು ಝೇಂಕರಿಸುತ್ತಿರುತ್ತವೆ. ಪ್ರತಿಯೊಬ್ಬ ಭಾರತೀಯ ಎದೆಯುಬ್ಬಿಸಿ ನಿಲ್ಲುವಂತಹ ಕ್ಷಣವದು.
 
 
ಇದಾದ ನಂತರ ಪ್ರತಿಯೊಬ್ಬರಿಗೂ ನಾನೇಕೆ ಸೈನ್ಯ ಸೇರಲಿಲ್ಲ ಎನ್ನಿಸುವಂತಹ ಗಳಿಗೆಗಳು. ನಮ್ಮ ಸೈನ್ಯದ ವಿವಿಧ ತುಕಡಿಗಳ ಆಕರ್ಷಕ, ಮನಮೋಹಕ, ಶಿಸ್ತಿನ,ಪಥಸಂಚಲನ. ಸೈನ್ಯದ ಹಲವು ವಿಶೇಷತೆಗಳನ್ನು ಸಾರುವ ಮಾದರಿಗಳು, ರಾಜ್ಯಗಳ ವಿವಿಧತೆಯನ್ನು ಸಾರುವ ಪ್ರಾತ್ಯಕ್ಷತೆಗಳ ಪ್ರದರ್ಶನ. ಇವುಗಳ ಜೊತೆಯಲ್ಲೇ ಹಲವಾರು ಕಲಾ ತಂಡಗಳು . . . ಕಲೆಯಲ್ಲಿ- ಸಾಂಸ್ಕೃತಿಕ ವೈಭವದಲ್ಲಿ ನಮಗೆ ಸರಿ ಸಾಟಿಯಿಲ್ಲ ಎಂದು ಜಗತ್ತಿಗೆ ಸಾರಿಹೇಳುವ ವೇದಿಕೆಯಾಗುತ್ತದೆ ರಾಜಪಥ. . . ವಿವಿಧತೆಯಲ್ಲಿ ಏಕತೆ ನಿಜವಾಗಿಯೂ ಸತ್ಯವೆನ್ನಿಸುವ ದಿನ . . . ಇದೆ ವೇದಿಕೆಯಲ್ಲಿ ಸೈನ್ಯದ ಸಾಧಕರಿಗೆ ಅಶೋಕ ಚಕ್ರ, ಪರಮವೀರ ಚಕ್ರ ಮೊದಲಾದ ಶೌರ್ಯ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳುತ್ತದೆ.
ಗಣರಾಜೋತ್ಸವದ ಅಂಗವಾಗಿ ದೇಶದ ಉನ್ನತ ನಾಗರೀಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ.
ಗಣರಾಜ್ಯೋತ್ಸವ ಆಚರಣೆ ವಿಧ್ಯುಕ್ತವಾಗಿ ಕೊನೆಯಾಗುದು ಜನವರಿ ೨೯ರಂದು. ಅಂದು ಸಂಜೆ ರಜಪಥದ ವಿಜಯ್ ಚೌಕದಲ್ಲಿ ರಿಟ್ರೀಟ್ ಸೆರೆಮನೀ ಇರುತ್ತದೆ. ಅಂದು ಸೈನ್ಯದ ಎಲ್ಲ ವಿಭಾಗಗಳ ವಾದ್ಯ ವೃಂದಗಳು ಆಕರ್ಷಕ ಪ್ರದರ್ಶನ ನೀಡುತ್ತವೆ. ಪಶ್ಚಿಮದಲ್ಲಿ ನೇಸರನು ಲೀನನಾಗುವ ಹೊತ್ತಿಗೆ ಸರಿಯಾಗಿ ರಾಷ್ತ್ರಗೀತೆಯೊಂದಿಗೆ ರಾಷ್ಟ್ರಧ್ವಜದ ಅವರೋಹಣವಾಗುತ್ತದೆ. ರಾಷ್ಟ್ರಪತಿ ಭವನ, ನಾರ್ತ್ ಬ್ಲಾಕ್,ಸೌತ್ ಬ್ಲಾಕ್, ಸಂಸತ್ತು ವಿದ್ಯುತ್ ದೀಪಾಲಂಕಾರಗಳಿಂದ ಕಣ್ಣುಕೋರೈಸುತ್ತವೆ.
 
 
ನನ್ನ ಈ ಲೇಖನದಿಂದಾಗಿಯಾದರೂ ನೀವುಗಳೆಲ್ಲ ತಪ್ಪದೇ ಈ ಬಾರಿ ನೇರಪ್ರಸಾರ ನೋಡಿದರೆ ಲೇಖನದ ಸಾರ್ಥಕ್ಯ. ಹೋಗು ಮಾರಾಯ ಪ್ರತಿವರ್ಷವೂ ಅದೇ ಇರುತ್ತದೆ. ಪಕ್ಕದ ಚಾನಲ್ನಲ್ಲಿ ಸಿನಿಮಾ-ಹಾಡು-ಹರಟೆ-ಅಡಿಗೆ ಕಾರ್ಯಕ್ರಮ ಬರುತ್ತಿರುತ್ತದೆ ಅಂದುಕೊಂಡರೆ ನೋ - ಕಾಮೆಂಟ್ಸ್ !!!
ನೀವು ನೋಡುತ್ತೀರೋ ಬಿಡುತ್ತೀರೋ ಈ ಬಾರಿ ಇಡೀ ವಿಶ್ವವೇ ಈ ಸಮಾರಂಭಕ್ಕೆ ಎದಿರು ನೋಡುತ್ತಿದೆ. ಏಕೆಂದರೆ ಅಮೇರಿಕ ರಾಷ್ಟ್ರಾಧ್ಯಕ್ಷರು ಈ ಸಾಲಿನ ಗಣರಾಜ್ಯೋತ್ಸವದ ಮುಖ್ಯ ಅಥಿತಿ.
ಸಾರೆ ಜಹಾ ಸೆ ಅಚ್ಚಾ ಹಿಂದೂಸ್ಥಾನ್ ಹಮಾರಾ !!!
ಪ್ರತಿಯೊಬ್ಬ ಭಾರತೀಯನಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು . . .

Saturday, September 06, 2014

ಆಗಸ್ಟ್ 15 ರ ಆಲೋಚನೆ . . .

ಪ್ರಾಯಶಃ ಬರವಣಿಗೆಯೇ ಹೀಗೆ. ಸದಾ ಬರೆಯುತ್ತಿದ್ದರೆ ನಮ್ಮಲ್ಲಿ ಹೊಸ ಹೊಸ ಆಲೋಚನೆ ಚಿಂತನೆಗಳು ವಿಷಯಗಳು ಹೊಳೆಯುತ್ತಿರುತ್ತವೆ, ಇಲ್ಲದೆ ಹೋದರೆ ಬರವಣಿಗೆ ಬಡವಾಗಿಬಿಡುತ್ತದೆ ಎಂದೆನಿಸುತ್ತದೆ. ಬಹಳ ದಿನಗಳ ನಂತರ ಮತ್ತೊಂದು ವಿಷಯ ನನ್ನನ್ನು ಕಾಡಿ ಈ ಲೇಖನಕ್ಕೆ ಮುಂದಾಗಿಸಿತು.

ಸದ್ಯಕ್ಕೆ ನಾನು ಕಾರ್ಯನಿಮಿತ್ತ ಓಮನ್ ದೇಶದ ಸೋಹರ್ ಎನ್ನುವ ಊರಿನಲ್ಲಿದ್ದೇನೆ. ಅದು ಆಗಸ್ಟ್ ೧೫ ರ ದಿನ. ಓಮನ್ ದೇಶದ ಕಾಲಮಾನದಲ್ಲಿ ಮುಂಜಾನೆ ೫ ೩೦. ಓಮನ್, ಭಾರತದ ಕಾಲಮಾನಕ್ಕೆ ೧ ೩೦ ಗಂಟೆ ಹಿಂದೆ. ಪ್ರಧಾನ ಮಂತ್ರಿಯ ಕೆಂಪು ಕೋಟೆಯ ಧ್ವಜಾರೋಹಣವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬೇಕೆಂದು, ಅವರ ವಾಗ್ಜರಿಯ ಭಾಷಣವನ್ನು ಕೇಳಬೇಕೆಂದು ಮುಂಜಾನೆಯೇ ದೂರದರ್ಶನದ ಎದುರಿಗೆ ಹಾಜರಿಯಾಗಿದ್ದೆ. ಅದು ಪ್ರಧಾನಮಂತ್ರಿ ಪ್ರಧಾನ ಸೇವಕನಾದ ದಿನ. ಎಂದಿನಂತೆ ಸರ್ಕಾರದ ಘೋಷಣೆಗಳಿಗೆ ಸೀಮಿತವಾಗಿರದೆ ಭಾರತದ ಸಾಮಾನ್ಯರಲ್ಲಿ ಸಾಮಾನ್ಯನಿಗೆ ಅನ್ವಯವಾಗುವಂತಹ ಮಾತುಗಳು ಮೂಡಿದವು. ಮೌಲ್ಯಗಳು ಕುಸಿಯುತ್ತಿರುವ ಈ ಸಮಯದಲ್ಲಿ ನೈತಿಕತೆಯನ್ನು ಎಚ್ಚರಿಸುವುದು ತಮ್ಮ ಹೊಣೆ ಎಂದು ಪ್ರಧಾನಿ ಭಾವಿಸಿದ್ದು ಸ್ಪಷ್ಟವಾಗಿತ್ತು. ಬುಲೆಟ್ ಪ್ರೂಫ್ ಗಾಜಿನಲ್ಲಿ ನಿಲ್ಲದೆ ತಮ್ಮ ಅಭೂತಪೂರ್ವ ಶೈಲಿಯಲ್ಲಿ ಮಾಡಿದ ಭಾಷಣಕ್ಕೆ ನಾನು ಸಹ ಮಾರುಹೋಗಿದ್ದೆ.

ಶಾಲೆಗಳಲ್ಲಿ ಕಲಿಯುವಾಗ ಇರುವಂತಹ ದೇಶ ಭಕ್ತಿಯ ಆ ಹುಮ್ಮಸ್ಸು ಕೆಲಸಕ್ಕೆ ಸೇರಿದೊಡನೆ ಏನಾಗುವುದು ದೇವರೇ ಬಲ್ಲ.
 ಆಫೀಸ್ ನಲ್ಲಿ ನಡೆಯುವ ಧ್ವಜಾರೋಹಣಕ್ಕೆ ಬರಲಾಗದಂತಹ ಅದ್ಯಾವ ಮಹತ್ತರ ಕಾರ್ಯವಿರುತ್ತದೆಯೋ ನಾ ಕಾಣೆ.
ಧ್ವಜಾರೋಹಣಕ್ಕೆ ಮೂವತ್ತು ಮಂದಿ, ಫೇಸ್ ಬುಕ್ ನಲ್ಲಿ ಅದೇ ಚಿತ್ರಕ್ಕೆ ಲೈಕ್ ಮಾಡುವವರು ಇನ್ನೂರು ಮಂದಿ. ವಾಹ್ !!! ತಾಯಿ ಭಾರತಿ ನೀನೇ ಧನ್ಯಳು.

ಸ್ವಾತಂತ್ರ್ಯೋತ್ಸವದ ಹುಮ್ಮಾಸಿನಲ್ಲಿದ್ದ ನಾನು ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ ದ ಕೆಲವು ಸಂಚಿಕೆಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸಿದೆ.

ಅದೇಕೋ ಆ ದಿನ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಹುಟ್ಟಿತು. ನಮಲ್ಲಿ ಪ್ರತಿದಿನ ಅಲ್ಲದಿದ್ದರೂ, ಆಗಸ್ಟ್ ೧೫ರಂದು ಗಾಂಧಿ, ಬೋಸ್, ಭಗತ್ ಸಿಂಗ್, ಶಾಸ್ತ್ರಿ,ಪಟೇಲ್, ನೆಹರು ಎಲ್ಲರೂ ನೆನಪಾಗುತ್ತಾರೆ. ನಾವೆಲ್ಲ ಓದಿರುವುದು ಇದನ್ನೇ. ಇವರುಗಳು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಎಂದು. ಇದೆಲ್ಲ ಸರಿ ಆದರೆ, ಹಿಂದಿನ ದಿನ ಸ್ವಾತಂತ್ರ್ಯೋತ್ಸವ ಆಚರಿಸಿದ ನೆರೆಯ ಪಾಕಿಸ್ತಾನದಲ್ಲಿಯೂ ಇವರುಗಳನ್ನು ಸ್ಮರಿಸಲಾಗುತ್ತದೆಯೇ ಇಲ್ಲವೇ. ಅಲ್ಲಿನ ಇತಿಹಾಸ ಪಠ್ಯ ಇವರುಗಳಿಗೆ ಸ್ಥಾನವನ್ನಾದರೂ ನೀಡಿದಿಯೆ ಇಲ್ಲವೇ. ಈ ತರಹದ ಸುಮಾರು ಪ್ರಶ್ನೆಗಳು . . . ಓಮನ್ ನಲ್ಲಿ ಪರಿಚವಾಗಿದ್ದ ಕೆಲವು ಪಾಕಿಸ್ತಾನಿಯರನ್ನು ಈ ಬಗ್ಗೆ ಅನೌಪಚಾರಿಕವಾಗಿ ಕೇಳಿದೆ. ದೊರೆತ ಉತ್ತರ ಆಶ್ಚರ್ಯವೇನನ್ನು ತರಿಸಲ್ಲಿಲ್ಲ...ಇಲ್ಲಿ ಮಹಾತ್ಮ ಗಾಂಧಿ ಹೀರೊ ಆದರೇ ಅಲ್ಲಿ ಮೊಹಮ್ಮೆದ್ ಅಲಿ ಜಿನ್ಹಾ. ಗಾಂಧಿಯ ಹೆಸರು ಉಲ್ಲೇಖವಾಗಿದೆ ಎನ್ನುವುದೇ ಸಂತೋಷ. ಎಂತಹ ವಿಪರ್ಯಾಸ ನೋಡಿ ಒಂದೇ ಸ್ವಾತಂತ್ರ್ಯ ಹೋರಾಟ ಆದರೇ ಅಲ್ಲಿ ಒಬ್ಬ ನಾಯಕರು ಇಲ್ಲಿ ಒಬ್ಬ ನಾಯಕರು. ಒಂದು ಇತಿಹಾಸಕ್ಕೆ ಒಂದೇ ಕಥೆ ಇರಲು ಸಾಧ್ಯವಲ್ಲವೇ. ಅಲ್ಲಿಗೆ ಇತಿಹಾಸ ಒಂದು ಸುಳ್ಳಿನ ಕಂತೆಯನ್ನಾಗಿ ಕಲಿಸಲಾಗುತ್ತಿದೆ ಎನ್ನುವುದು ಸತ್ಯ. ದೇಶದ ಉಗಮಕ್ಕೆ ಆತ ಕಾರಣನಿರಬಹುದು ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಗಿಂತ ಹೆಚ್ಚಿನ ಪಾತ್ರ ಆತನದು ಇರಲಾರದು ಅಲ್ಲವೇ. . .

ಇಷ್ಟಕ್ಕೆ ನನಗೆ ತೃಪ್ತಿಯಾಗಲಿಲ್ಲ. ದೇಶ ವಿಭಜನೆಯ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿತು. ಯೂ ಟ್ಯೂಬ್ ನಲ್ಲಿ BBC ಯ "The Day India Burnt" ಎಂಬ ವೀಡಿಯೋ ವನ್ನು ವೀಕ್ಷಿಸಿದೆ. ತುಂಬಾ ಸಡಗರದ ಸಂತೋಷದ ಸ್ವಾತಂತ್ರ್ಯ ದಿನಾಚರಣೆಯ ಮತ್ತೊಂದು ಕರಾಳ ಮುಖವನ್ನು ನೋಡಿ ಮನಸ್ಸಿಗೆ ಖೇದವಾಯಿತು.

 

 


ಧರ್ಮದ ಆಧಾರದಲ್ಲಿ ದೇಶ ವಿಭಜನೆ !!! ಇಂತಹ ಒಂದು ಆಲೋಚನೆ ನೂರಾರು ವರ್ಷಗಳಿಂದ ಜೊತೆಯಾಗಿ ಬಾಳುತ್ತಿದ್ದ ಜನ ತಮ್ಮ ಒಡನಾಡಿಗಳನ್ನೇ ಕೊಲ್ಲಲು ಪ್ರೇರಿಪಿಸಿತ್ತು ಎಂದರೆ ಇನ್ನೆಂತಹ ಕೆಟ್ಟ ಶಕ್ತಿ ಇದ್ದಿರಬೇಡ.
The Great Culcutta Killings, ಆಗಿನ ಕಾಲದಲ್ಲೇ ಜಗತ್ತಿನ ಕಣ್ಣನ್ನು ತನ್ನ ವಿವಿಧತೆಯಿಂದ ತನ್ನೆಡೆಗೆ ಸೆಳೆದುಕೊಂಡಿದ್ದ ಲಾಹೋರ್ ಹಂಚಿಕೆಯ ವಿಷಯಗಳನ್ನು ಆ ವೀಡಿಯೋ ನಲ್ಲಿ ನೋಡುತ್ತಿದ್ದರೆ ಮನ ಮರುಗುತ್ತಿತ್ತು. ಸಿಕ್ಕ ಸಿಕ್ಕ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆಗೈಯುವುದು, ಸುಲಿಗೆ, ದರೋಡೆ, ಒಂದು ಪ್ರದೇಶಕ್ಕೆ ಬೆಂಕಿ ಹಚ್ಚಿ ಜನರನ್ನು ಕಾಲಿ ಮಾಡಿಸುವುದು,
ಪ್ರಾಣಕ್ಕಿಂತ ಮಾನವೇ ಮುಖ್ಯವೆಂದು ತನ್ನ ಸ್ವಂತ ಮಗಳ ಶಿರಸ್ಚೇದನ ಮಾಡುವ ತಂದೆ, ಈ ವಿಷಯಗಳು ಕೇಳುವುದಕ್ಕೆ ಭಾಯನಕವಾಗಿತ್ತು.

 


ಐವತ್ತು ಮೈಲಿ ಉದ್ದದ ಮನುಷ್ಯರ ಸಾಲು . . . ನಾವುಗಳು ಗಳಿಸಿದ ವಸ್ತುಗಳಲ್ಲಿ ಒಂದನ್ನು ಕಳೆದುಕೊಂಡರೆ ಎಷ್ಟು ಮರಗುತ್ತೇವೆ, ಅಂತಹುದರಲ್ಲಿ ಅದಿನೈದು ಮಿಲಿಯನ್ ಜನ ತಾವು ಗಳಿಸಿದ್ದ, ತಮ್ಮ ಪೂರ್ವಜರು ಗಳಿಸಿದ್ದ ಆಸ್ತಿ ಪಾಸ್ತಿ ಗಳನೆಲ್ಲ ತಮ್ಮದು ಅಲ್ಲವೇನು ಎಂಬಂತೆ ತ್ಯಜಿಸಿ, ನಿರ್ಗತಿಕರಾಗಿ ಮತ್ತೊಂದು ಜಾಗಕ್ಕೆ ಸ್ಥಾನ ಪಲ್ಲಟವಾದರು. ಈ ಸಮಯದಲ್ಲಿ ಒಂದು ಮಿಲಿಯನ್ ಮಂದಿ ಧರ್ಮದಳ್ಳುರಿಯಲ್ಲಿ ಜೀವವನ್ನೇ ಕಳೆದುಕೊಂಡರು ಎಂದರೆ ಇದಕ್ಕಿಂತ ಮನಕಲಕುವ ದೃಶ್ಯ ಮತ್ತೊಂದು ಇರಲಾಗದು ಅಲ್ಲವೇ. . . ನಿಜಕ್ಕೂ ಮನುಷ್ಯತ್ವ ಸತ್ತ ದಿನ ಅದೇ ಇರಬೇಕು. ತನ್ನದು ತನ್ನವರೆಲ್ಲರನ್ನು ಕಳೆದುಕೊಂಡ ಜೀವಕ್ಕೆ ಮಾತ್ರ ಅದರ ನಿಜವಾದ ಸಂಕಟವೇನು ಎಂಬುದು ತಿಳಿದಿರುವುದಕ್ಕೆ ಸಾಧ್ಯ. ಪ್ರಾಯಶಃ ಭಾಗ್ ಮಿಲ್ಕಾ ಭಾಗ್ ಚಿತ್ರ ನೋಡಿರುವ ಎಲ್ಲರಿಗೂ ಇಂತಹ ದೃಶ್ಯ  ಸಂಕಟವನ್ನು ತಂದಿರುತ್ತದೆ.

ಒಬ್ಬ ಲೀಡರ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಇರುವ ಮಹತ್ವ ವನ್ನು ಮನಗಾಣಲು ಈ ಘಟನೆಗಿಂತ ಮತ್ತೊಂದು ಉದಾಹರಣೆ ಬೇಕಿಲ್ಲವೆನಿಸುತ್ತದೆ.

ಸರಿ ಸುಮಾರು ಮುನ್ನೂರು ವರ್ಷಗಳ ದಾಸ್ಯದ ವಿರುದ್ದ ಯಾವುದೇ ಧರ್ಮ ಜಾತಿಗಳ ತಾರತಮ್ಯವಿಲ್ಲದೆ ಹೋರಾಡಿದ್ದ ನಾವುಗಳು ನಮ್ಮ ಅಖಂಡತೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಇದಕೆಲ್ಲ ಕಾರಣ ಧರ್ಮಾಂದ ಜಿನ್ಹಾ ನೇ . . .  ಅಧಿಕಾರ ಲಾಲಸಿಯಾಗಿದ್ದ ನೆಹರು ನೇ . . . ನೂರಾರು ವರ್ಷಗಳಿಂದ ನಮಲ್ಲಿ ಇದ್ದ ಜಾತೀಯತೆಯ ಅಸ್ಪೃಶ್ಯತೆ ಜಿನ್ಹಾನಿಗೆ ಸ್ಪೂರ್ತಿಯಾಗಿತ್ತೆ . . . ಈ ನಿರ್ಧಾರಕ್ಕೆ ಎಲ್ಲ ನಾಯಕರ ಒಪ್ಪಿಗೆ ಇತ್ತೇ. ಇದರ ಮುಂದಾಗುವ ಪರಿಣಾಮ ಯಾವುದೇ ನಾಯಕನ ಅರಿವಿಗೆ ಬಂದಿರಲ್ಲಿಲ್ಲವೇ. ನಮ್ಮ ಜನಗಳಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ್ದ ನಾಯಕರುಗಳು ನಮಲ್ಲಿ ಧರ್ಮ ಸಹಿಷ್ಣುತೆ,ಒಗ್ಗಟ್ಟಿನ ಪಾಠವನ್ನು ಸರಿಯಾಗಿ ಕಲಿಸಿರಲಿಲ್ಲವೇ  . . . ಗಾಂಧಿಯ ಪ್ರಭಾವ ಅಷ್ಟು ಸ್ತಿಮಿತವಾಗಿತ್ತೆ . . .
ಈಗ ಕೊಡುತ್ತಿರುವ ಅಲ್ಪ ಸಂಖ್ಯಾತ ರಿಸರ್ವೇಶನ್ಸ್ ಆಗಲೇ ಅಧಿಕಾರದಲ್ಲಿ ಕೊಟ್ಟಿದ್ದರೆ ದೇಶ ವಿಭಜನೆಯನ್ನು ತಡೆಯಬಹುದಿತ್ತೆ.

ಒಂದೇ ಒಂದು ಸಲ ಆಲೋಚಿಸಿ ಅಖಂಡ ಭಾರತವಿದ್ದಿದ್ದರೆ ಹೇಗಿರುತ್ತಿತ್ತು. ಹಿಂದೂ ಮುಸ್ಲಿಂ ಬಂಧುಗಳು ಪರಸ್ಪರ ದ್ವೇಷಿಸುವ ಪ್ರಮೇಯವೇ ಬರುತ್ತಿರಲಿಲ್ಲ. ೧೯೭೧, ಕಾರ್ಗಿಲ್ ಯುದ್ದಗಳೇ ಸಂಭವಿಸುತ್ತಿರಲ್ಲಿಲ್ಲ. ಎಷ್ಟು ಸೈನಿಕರ ಪ್ರಾಣ ಉಳಿದಿರುತ್ತಿತ್ತು. ಪ್ರಪಂಚದ ಯಾವುದೇ ಶಕ್ತಿಗೆ ಸಾವಾಲು ಎಸೆಯಬಲ್ಲ ಶಕ್ತಿಯುತ ರಾಷ್ಟ್ರವಾಗಿರುತ್ತಿತ್ತು ಅಖಂಡ ಭಾರತ.
ಇದೆಲ್ಲವನ್ನೂ ಬಿಡಿ, ಭಯೋತ್ಪಾದನೆ ಎನ್ನುವ ಪಿಡುಗೇ ಇರುತ್ತಿರಲಿಲ್ಲ.

ಸದಾ ಗುಂಡಿನ ಶಬ್ದವೇ ಝೇಂಕರಿಸುತ್ತಿರುವ ಕಾಶ್ಮೀರ ವಿಶ್ವ ಪ್ರಸಿದ್ದ ಪ್ರವಾಸಿ ತಾಣವಾಗಿರುತ್ತಿತ್ತು. ಕಾಶ್ಮೀರಿ ಪಂಡಿತರ ಪದ್ಯಗಳು ಹಿಮಾಲಯದಲ್ಲಿ ಶಾಂತಿಯಿಂದ ಪ್ರತಿಧ್ವನಿಸುತ್ತಿದ್ದವು ಎಂದು ಅನ್ನಿಸುವುದಿಲ್ಲವೇ . . .

ಮಠದ ತಿಪ್ಪೇಸ್ವಾಮಿ ವಿನಯ್
ಸ್ಥಳ: ಸೊಹರ್,
ದೇಶ: ಓಮನ್
ದಿನಾಂಕ: ಸೆಪ್ಟೆಂಬರ್ ಆರು ೨೦೧೪.
ಮಧ್ಯರಾತ್ರಿ ೧೨:೪೪.


 

Sunday, April 13, 2014

ಮುಗ್ದ

ಬಿಸಿಲಿನ ಬೇಗೆಗೆ ಬೆಂದುಬಸವಳಿದಿದ್ದ ಬೆಂಗಳೂರಿಗೆ ಅಕಾಲದಲ್ಲಿ ಹಿಂದಿನ ರಾತ್ರಿ ಸುರಿದ ಸೋನೆ ಮಳೆ ಕೊಂಚ ನೆಮ್ಮದಿ ತಂದಿತ್ತು. ಆ ದಿನದ ಮುಂಜಾವು ಆಹ್ಲಾದಕರವಾಗಿತ್ತು.
ಎಂದಿನಂತೆ ಮನೆಯ ಕೆಲಸ ಕಾರ್ಯಗಳನೆಲ್ಲ ಸಮಾಪ್ತಿಗೊಳಿಸಿ ಗೃಹಿಣಿ ಅನುಪಮ ತನ್ನ ವೃತ್ತಿಗಾಗಿ ಎಲೆಕ್ಟ್ರಾನಿಕ್ ಸಿಟೀ ತಲುಪಲು ಮೆಜಸ್ಟಿಕ್‌ನಲ್ಲಿ ಎರಡನೇ ಬಸ್ಸಿಗಾಗಿ ಕಾಯುತ್ತಿದ್ದಳು.
ಅಚಾನಕ್ಕಾಗಿ ಅಂದು ಪ್ರೌಢ ಶಾಲೆಯಲ್ಲಿ ಜೊತೆಗೆ ಓದಿದ್ದ ಗೌರಿಯನ್ನು ಬಹಳ ವರ್ಷಗಳ ನಂತರ ಎದುರುಗೊಂಡಳು.

"ಹೇ!!! ನೀನು ಗೌರಿ ಅಲ್ವಾ ... ನನ್ನ ಗುರುತು ಸಿಕ್ಕಿತಾ? ನಾನು ಅನು... ಹೇಗಿದಿಯಾ... ನೀನನ್ನು ನೋಡಿ ತುಂಬಾ ಸಂತೋಷವಾಯಿತು... ಎಲ್ಲಿದಿಯ, ಏನು ಮಾಡ್ಕೊಂಡಿದೀಯ...ಬೆಳ್ಳಿಗ್ಗೆ ಇಷ್ಟು ಬೇಗ ಎಲ್ಲಿಗೆ ಹೊರಟಿರುವೆ..." ಎಂದು ತನೆಲ್ಲ ಪ್ರಶ್ನೆಗಳನ್ನು ಒಂದರ ಮೇಲೊಂದರಂತೆ ತನ್ನ ಗೆಳತಿ ಗೌರಿಗೆ ಎಸೆದಳು...
ಪ್ರತ್ಯುತ್ತರವಾಗಿ ಗೌರಿ, "ನಾನು ತುಂಬಾ ಚೆನ್ನಾಗಿದೀನಿ ಅನು. ನಾನು ಬೆಂಗಳೂರಲ್ಲೇ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡ್ತಾ ಇದೀನಿ.ನೀನು ಸಾಫ್ಟ್‌ವೇರ್ ಇಂಜಿನಿಯರ್ ಆಗಿದಿಯಾ ಅಂತ ಗೋತಾಯ್ತು. ತುಂಬಾ ಸಂತೋಷವಾಯ್ತು. ಹ!!! ಇವನು ನನ್ನ ಮಗ ಸಿದ್ದಾಂತ.ಈಗ ಬೇಸಿಗೆ ರಜೆಯಲ್ಲವೇ ಅದಕ್ಕಾಗಿ ಇವನನ್ನು ಕರೆದುಕೊಂಡು ತವರು ಮನೆಗೆ ಹೊರಟಿದ್ದೀನಿ..."  

ಹೀಗೆ ಸಂಭಾಷಣೆ, ಉಭಯ ಕುಶಲೋಪರಿ ಮುಂದುವರೆಯುತ್ತಿರಬೇಕಾದರೆ ಹೊರಟ ವೋಲ್ವೋ ಬಸ್ ನ ಹಾರ್ನ್ ಕೇಳಿ ಎಚ್ಚೆತ್ತುಕೊಂಡ ಅನು," ಹೇ ಗೌರಿ ನನಗೆ ತಡವಾಗುತ್ತಿದೆ,ಮೀಟಿಂಗ್ ಬೇರೆ ಇದೆ,ಮನೆಗೆ ತಪ್ಪದೆ ಬಾ,ಮತ್ತೊಮ್ಮೆ ಸಿಗೋಣ,ಹ್ಯಾಪೀ ಜರ್ನೀ" ಎಂದು ಹೇಳಿ ಎಲೆಕ್ಟ್ರಾನಿಕ್ ಸಿಟೀ ಬುಸ್ ಹತ್ತಿದಳು.

ಅವಸರದಲ್ಲಿದ್ದ ಅನುಗೆ ವಿದಾಯ ಹೇಳಿ ಗೌರಿ-ಸಿದ್ದಾಂತ ಕೆಂಪೇಗೌಡ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿದರು...

ಕನ್ನಡ ಕಾಮನಬಿಲ್ಲು 101.3 ಕಂಪನಾಂಕಗಳಲ್ಲಿ ಮೂಡಿ ಬರುತ್ತಿದ್ದ ಇಂಪಾದ ಕನ್ನಡ ಹಾಡುಗಳು ಸಹ ಅಂದೇಕೋ ಅನುಪಮಳ ಮನಸ್ಸಿಗೆ ಸಂತೋಷ ಕೊಡುತ್ತಿರಲಿಲ್ಲ.ಏನೋ ಕಳೆದುಕೊಂಡಿದ್ದೇನೆ ಎಂಬ ಭಾವ ಆಕೆಯನ್ನು ಆವರಿಸಿಕೊಂಡಿತ್ತು. ಕಣ್ಣು ಮುಚ್ಚಿದವಳಿಗೆ ತನ್ನ ಬಾಲ್ಯದ ಬೇಸಿಗೆ ರಜೆಯ ಸ್ಮೃತಿಯಾಯಿತು....



ಅಜ್ಜನ ಮನೆಯಲ್ಲೇ ರಜೆಯನ್ನು ಸಂಪೂರ್ಣವಾಗಿ ಕಳೆಯಬೇಕೆಂಬ ತುಡಿತದಲ್ಲಿ ಎರಡು ತಿಂಗಳಿಗಾಗುವಷ್ಟು ಕೊಟ್ಟ ಹೋಮ್ ವರ್ಕ್ ಅನ್ನುಕೇವಲ ಒಂದೇ ವಾರದಲ್ಲಿ ಮುಗಿಸಿ ತನ್ನ ಅಮ್ಮನಿಗೆ "ಯಾವತ್ತೂ ತಾತನ ಮನೆಗೆ ಹೋಗೋದು" ಎಂದು ಪೀಡಿಸುತ್ತಿದಳು. ಮಗಳನ್ನು ಸಂತೈಸಲೆಂದು ಮನೆಯ ಕೆಲಸಗಳನ್ನೆಲ್ಲ ಬೇಗ ಬೇಗನೆ ಮುಗಿಸಿ, ಮಗಳೊಂದಿಗೆ ಚೌಕ ಬಾರ,ಪತ್ತ ಮಣೆ, ಹಾವು ಏಣಿ ಮುಂತಾದ ಆಟಗಳನ್ನು ಆಡುತ್ತಿದರು.ತನ್ನನ್ನು ಅಳಿಸಬಾರದೆಂಬ ಕಾರಣಕ್ಕೆ ಬೇಕೆಂದೇ ಸೋಲುತ್ತಿದ್ದ ತಾಯಿಯನ್ನು ನೆನೆದು ಅನುಪಮಳ ಕಣ್ಣಂಚು ತೇವವಾಗಿತ್ತು.



ಅಜ್ಜನ ಮನೆ!!! ಅದೊಂದು ಸ್ವರ್ಗವೇ ಸರಿ; ಬೇಸಿಗೆ ರಜೆ ಬಂದಿತೆಂದರೆ ಅಲ್ಲೊಂದು ಪುಟ್ಟ ವಾನರ ಸೇನೆಯೇ ಇರುತಿತ್ತು.
ಪ್ರತಿನಿತ್ಯ ಹೆಂಡೆ ನೀರಿನ ಅಭ್ಯಂಜನ,ಅಜ್ಜಿಯ ಕೈಯ ರುಚಿಯಾದ ತಿಂಡಿ ತಿನಿಸುಗಳು...
ಎಲ್ಲರೂ ಸೇರಿ,ಊಟ ಕಟ್ಟಿಕೊಂಡು, ತಾತನ ಜೊತೆ ಎತ್ತಿನ ಬಂಡಿಯನ್ನು ಏರಿ ಹೊಲಕ್ಕೆ ಹೋಗುತ್ತಿದ್ದದ್ದು,
ಎಲ್ಲರೂ ಒಂದೊಂದು ಹಸುವಿನ ಕುತ್ತಿಗೆ ಕಟ್ಟಿದ್ದ ಹಗವನ್ನು ಹಿಡಿದು ಅದನ್ನು ನೀರು ಕುಡಿಸಲು ಕರೆದುಕೊಂಡು ಹೋಗುತ್ತಿದ್ದದ್ದು,
 "ತಾತ ದೊಡ್ಡವಳಾದ ಮೇಲೆ ಈ ಹಸುವಿನ ಕೊರಳಿಗೊಂದು ಗಂಟೆ ಕೊಡಿಸುತ್ತೇನೆ" ಎಂದು ಹೇಳಿದ ಮಾತು,
ಅಜ್ಜ ನೀರು ಕಟ್ಟ ಬೇಕಾದರೆ ಎಲ್ಲ ಸೇರಿ ಡ್ಯಾಮ್ ನಿರ್ಮಿಸಿದ್ದು, ಅಜ್ಜ ಕರೆದೊಡನೆ ಚಂಗನೆ ಹಾರಿ ಬಂದ ಆ ಮುದ್ದಾದ ಹಸುವಿನ ಕರು, ತಾತ ಹಾಲು ಕರೆಯುತ್ತಿದ್ದ ದೃಶ್ಯ,ಎಲ್ಲ ಅನುಪಮಾ ಸ್ಮೃತಿಯನ್ನು ಆವರಿಸಿದ್ದವು...

ಎಲ್ಲ ಮೊಮ್ಮಕ್ಕಳನ್ನು ಕೂರಿಸಿಕೊಂಡು ಹುಣ್ಣಿಮೆಯ ಬಾನಂಗಳದಲ್ಲಿ ಅಜ್ಜಿ ಹಾಕುತ್ತಿದ್ದ ಆ ಕೈ ತುತ್ತು,ಹೇಳುತ್ತಿದ್ದ ಸುಂದರ ಕಥೆಗಳು,ಎಲ್ಲ ಒಟ್ಟಿಗೆ ಅಂಗಳದಲ್ಲೇ ಮಲಗುತ್ತಿದ್ದ ದೃಶ್ಯ,ಮಾವಿನ ಹಣ್ಣಿನ ಕಾಲವಾಗುತ್ತಿದ್ದರಿಂದ ಹಳ್ಳಿಯ ಸಮೀಪವೇ ಇದ್ದ ದೇವಾಲಯಕ್ಕೆ ಹೋಗಿ ಅಲ್ಲೇ ಮಲಗೆದ್ದು ಹೋಳಿಗೆ ಸೀಕರಣೆಯ ಎಡೆ ಹಾಕಿಸುತ್ತಿದ್ದದ್ದು,ಅಮ್ಮನೊಂದಿಗೆ ಇಡುತಿದ್ದ ಸಂಡಿಗೆ, ಉದ್ದುತ್ತಿದ್ದ ಹಪ್ಪಳ, ಜೆಡೀ ಮಣ್ಣಿನಲ್ಲಿ ಮಾಡುತ್ತಿದ್ದ ಗೊಂಬೆಗಳು,ಸೈಕಲ್ ಕಲೆತದ್ದು,ಈಜು ಕಲೆತದ್ದು,ಆಡುತ್ತಿದ್ದ ಕಣ್ಣಾ ಮುಚ್ಚಾಲೆ,ಕಳ್ಳ ಪೋಲೀಸ್,ಕುಂಟೋ ಬಿಲ್ಲೆ ಎಲ್ಲವನ್ನೂ ನೆನೆಯುತ್ತಿರುವಾಗಲೇ ಎಲೆಕ್ಟ್ರಾನಿಕ್ ಸಿಟೀ ಬಂದೆ ಬಿಟ್ಟಿತು.

ಮೀಟಿಂಗ್‌ನಲ್ಲಿದ್ದರೂ ಅನುಪಮಾಳ ಮನಸ್ಸು ಮಾತ್ರ ಹಳಿಯಲ್ಲೇ ವಿಹರಿಸುತ್ತಿತ್ತು.
ಕಳೆದ ವಾರವಷ್ಟೇ ತನ್ನ ಮಗ ವಿಕಾಸಾನನ್ನು ಸಮ್ಮರ್ ಕ್ಯಾಂಪ್ ಗೆ ಸೇರಿಸಿದ್ದೇನೆ ಎಂದು ಹೆಮ್ಮೆಯಿಂದ ಬೀಗಿದ್ದ ತಾಯಿ ಹೃದಯ ಇಂದು ತನ್ನ ಮಗನ ಮುಗ್ದ ಬಾಲ್ಯವನ್ನು ತಾನೇ ಕಸಿದುಕೊಳುತ್ತಿದೆಣೆಯೇ ಎಂದು ಮರಗುತ್ತಿತ್ತು.
ತಾನು ಸಹ ಗೌರಿಯ ಹಾಗೆ ಮಗನನ್ನು ಅಜ್ಜಿಯ ಮನೆಗೆ ಕರೆದುಕೊಂಡು ಹೋಗಬೇಕೆಂಬ ಆಶಯದಿಂದ ಅದಿನೈದು ದಿನಗಳ ರಜೆ ಕೇಳಿದಳು. ಪ್ರಾಜೆಕ್ಟ್ ಡೆಡ್‌ಲೈನ್ ಕಾರಣದಿಂದಾಗಿ ರಜೆ ತಿರಸ್ಕೃತವಾಯಿತು.

ಆದರೇನಂತೆ, ನಾನು ಅನುಭವಿಸಿದ ಬಾಲ್ಯದ ಆ ಸವಿ ನನ್ನ ಮಗನಿಗೂ ಲಭಿಸಬೇಕೆಂದು ಯೋಚಿಸಿ, ಮನೆಗೆ ಹೋದವಳೇ ತನ್ನ ತಾಯಿಗೆ ಕರೆ ಮಾಡಿದಳು.
"ಅಮ್ಮ ನಾಳೆ ಬೆಳಿಗ್ಗೆ ವಿಕಾಸನನ್ನು ಬಸ್ನಲ್ಲಿ ಕೂರಿಸುತ್ತೆನೆ;ಬಸ್ ನಿಲ್ದಾಣಕ್ಕೆ ಹೋಗಿ ಅವನನ್ನು ಕರೆದುಕೊಂಡು ಬರಲು ಅಪ್ಪನಿಗೆ ತಿಳಿಸು" ಎಂದು ಹೇಳಿದಳು.
ಸಮ್ಮರ್ ಕ್ಯಾಂಪ್ ಗೆ ಕಟ್ಟಿದ ಹಣ ಹೋದರೋಯಿತು ಎಂದು ಒಂದು ಪುಟ್ಟ ಬ್ಯಾಗಿಗೆ ಮಗನ ಬಟ್ಟೆಗಳನ್ನು ಇಟ್ಟು ತಯಾರು ಮಾಡಿದಳು...  

  

Saturday, June 22, 2013

ಈ ಟಿವಿ ಕನ್ನಡ ... ಇದು ನಮ್ಮ ಚಾನೆಲ್ ...

ಸುಧಾಮೂರ್ತಿಯವರ "ಏರಿಳಿತದ ದಾರಿಯಲ್ಲಿ" ಪುಸ್ತಕದ ಕಥೆ ಎಂಬ ನೆನಪು ...
ಒಬ್ಬ ಧರ್ಮಾತ್ಮ ಯಾವುದೇ ಪ್ರತಿಫಲವನ್ನು ಬಯಸದೆ ಸುಧಾರವರ ಸಮಾಜ ಸೇವೆಗೆ ಸಹಾಯ ಮಾಡುತ್ತಿರುತ್ತಾನೆ.
ಆತ ಕಾಲವಾದ ನಂತರ ಅಧಿಕಾರ ವಹಿಸಿಕೊಳ್ಳುವ ಆತನ ಮಗ ಸುಧಾರವರಿಗೆ ನೀವು ನಮಗೆ ಮೋಸ ಮಾಡುತ್ತಿದ್ದಿರೆಂದು ನಮ್ಮ ಸಹಾಯ ಮುಂದುವರೆಯಬೇಕಾದರೆ ನಮ್ಮ ಕಂಪನಿಯ ಹೆಸರನ್ನು ಜಾಹಿರಾತಿನಲ್ಲಿ ಪ್ರಕಟಿಸಬೇಕೆಂದು ಒತ್ತಾಯಿಸುತ್ತಾನೆ.
ಇಲ್ಲಿ ಏನಾಯಿತೆಂದರೆ "Idelogical shift". ಕಾರ್ಯವೈಖರಿ,ನಿಲುವು ಧೋರಣೆ ಎಲ್ಲವು ಭಿನ್ನ..
ಇದನ್ನು ಇಲ್ಲೇಕೆ ಪ್ರಸ್ತಾಪಿಸಿದೆ ಎಂಬುದು ಕೆಳಗಿನ ಲೇಖನ ಓದಿದ ಮೇಲೆ ತಿಳಿಯುತ್ತದೆ.

ಒಂದು ದಶಕದ ಹಿಂದಿನ ಮಾತು . ಪಟ್ಟಣದ ಸ್ಥಿತಿ ನನಗೆ ಗೊತ್ತಿಲ್ಲ ಆದರೆ ನಾನಿದ್ದ ಹಳ್ಳಿಯಲ್ಲಿ,ಅಲ್ಲಿನ ಕಿರುತೆರೆಯಲ್ಲಿ ಬರುತ್ತಿದದ್ದು ಕೆಲವೇ ಕೆಲವು ಚಾನೆಲ್ ಗಳು.ಅದರಲ್ಲೂ ಆಂಧ್ರದ ಗಡಿಗೆ ಹತ್ತಿರವಿರುವ ನಮಲ್ಲಿ ಕೇವಲ ಕನ್ನಡ,ತೆಲುಗು,ಒಂದೋ ಎರಡೋ ಹಿಂದಿ ಚಾನೆಲ್ ಗಳು (ಡಿ ಡಿ ೧ ಸೇರಿ) ಬರುತ್ತಿದ್ದವು.              
                   

ಅದೊಂದು ಭಾನುವಾರವೆಂಬ ನೆನಪು. ಕೇವಲ ಚಂದನ,ಉದಯ ಟಿವಿ ಇದ್ದ ಕನ್ನಡದ ಚಾನೆಲ್ ಗಳ ಪಟ್ಟಿಗೆ ಒಂದು ಹೊಸ ಚಾನೆಲ್ ಸೇರ್ಪಡೆಯಾಗುತ್ತಿತ್ತು. ಹತ್ತು ಗಂಟೆ ಅಥವಾ ಹನ್ನೊಂದು ಗಂಟೆ ಅನಿಸುತ್ತದೆ. ೫ ನಿಮಿಷದ ವಾರ್ತೆಯೊಂದಿಗೆ ಪ್ರಾರಂಭವಾಗಿ,ರಾಜ್ ಅಭಿನಯದ ಗಂಧದ ಗುಡಿ ಚಲಚಿತ್ರವನ್ನು ಪ್ರಸಾರ ಮಾಡಿತ್ತು. ಈ ಚಾನೆಲ್ ತನ್ನ ಉತ್ತಮ ಅಭಿರುಚಿಯ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲರ ಮನಗೆದ್ದಿತು.

ಈ ಚಾನೆಲ್ ನಲ್ಲಿ ನಾನು ನೋಡಿ ಬೆಳೆದ ಕೆಲವು ಕಾರ್ಯಕ್ರಮಗಳನ್ನು ಇಲ್ಲಿ ಉಲ್ಲೇಖಿಸುತ್ತಿದೇನೆ.
"ಅನ್ನದಾತ",
"ಅಗ್ರ ರಾಷ್ಟ್ರೀಯ ವಾರ್ತೆ"
(ಪ್ರಭಾವ-ಪಕ್ಷಪಾತವಿಲ್ಲದ ನ್ಯೂಸ್; ಇಂದು ಕನ್ನಡ ಒಂದರಲ್ಲೇ ೫-೬ ನ್ಯೂಸ್ ಚಾನೆಲ್ ಗಳಾಗಿವೆ. ಇವುಗಳಲೆಲ್ಲ ಇರುವ ನ್ಯೂಸ್ ರೀಡರ್ಸ್ ಗಳಲೆಲ್ಲ ಈ ಟಿವಿ ಗರಡಿಯಲ್ಲೇ ಪಳಗಿದವರು),
ಗಾನ ಕೋಗಿಲೆ ಎಸ್ ಪಿ ಬಾಲಸುಬ್ರಮಣ್ಯಂರವರನ್ನು ಕಿರುತೆರೆಗೆ ತಂದ, ವಿನಯ ಪ್ರಸಾದ್ ನಿರೂಪಿಸುತ್ತಿದ್ದ, ಅಂಚೆ ಮೂಲಕ ನಾವು ಕಳುಹಿಸುತ್ತಿದ್ದ ಹಾಡುಗಳನ್ನು ಹಾಡಿಸುತ್ತಾ, ನಮ್ಮ ನೆಲದ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದ "ಎದೆ ತುಂಬಿ ಹಾಡುವೆನು",
ಎಸ್ ಎಲ್ ಭೈರಪ್ಪನವ ಕಾದಂಬರಿ ಆಧಾರಿತ ಧಾರವಾಹಿ "ಗೃಹಭಂಗ",
(ಪ್ರತಿ ಶನಿವಾರ ಸಂಜೆ ಏಳು ಮೂವತಕ್ಕೆ ಪ್ರಸಾರವಾಗುತ್ತಿತ್ತು. ಕಾದಂಬರಿ ಓದುವಾಗ ಇದೆ ಧಾರಾವಾಹಿಯ ಪಾತ್ರಗಳೇ ಕಣ್ಮುಂದೆ ಬರುತ್ತಿದ್ದವು. http://www.youtube.com/watch?v=fDaNNPgQNzs; ಈ ಲಿಂಕ್ ನೋಡಿ, ನಿಮ್ಮ ನೆನಪು ಹಸಿರಾಗಬಹುದು),
ಟಿ ಎನ್ ಸೀತಾರಾಂ ರವರ ಭಾವನೆಗಳ ಬಣ್ಣದ ಚಿತ್ರಣ, ಕುತೂಹಲದ ಕೌತುಕವಾದ  "ಮನ್ವಂತರ","ಮುಕ್ತ","ಮುಕ್ತ-ಮುಕ್ತ" ಧಾರಾವಾಹಿಗಳು,
ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುತ್ತಿದ್ದ "ಪಾಪ ಪಾಂಡು","ಸಿಲ್ಲಿ ಲಲ್ಲಿ",
ಸಿನಿಮಾ ತಾರೆಯವರುಗಳ ಹಿನ್ನಲೆಯನ್ನು ತೋರಿಸುತ್ತಿದ್ದ "ಆಟೋಗ್ರಾಫ್ ಪ್ಲೀಸ್",
ಜಯಂತ್ ಕಾಯ್ಕಿಣಿ ನಿರೂಪಿಸುತ್ತಿದ್ದ "ರಸ ಋಷಿಗೆ ನಮಸ್ಕಾರ", "ವರಕವಿಗೆ ನಮನ","ಕಡಲ ತೀರ ಭಾರ್ಗವನಿಗೆ ನಮನ",
ಸಿ ಅಶ್ವಥ್ ನೇತೃತ್ವದ "ಕನ್ನಡವೇ ಸತ್ಯ",
ಪ್ರವೀಣ್ ಗೋಡ್ಖಿಂಡಿ ನೇತೃತ್ವದ "ರಾಗ ರಂಜನಿ",
"ಪಂಚ ತಂತ್ರ",
ರವಿ ಬೆಳೆಗೆರೆ ಮುಂದಾಳತ್ವದಲ್ಲಿ ಮೋದಿ ಬರುತ್ತಿದ್ದ "ಎಂದೂ ಮರೆಯದ ಹಾಡು",
ಇಂತಹ ಹತ್ತಾರು ಹಲವಾರು ಕಾರ್ಯಕ್ರಮಗಳ ಕಲಶದಂತಿದ್ದ ಈ ಟಿವಿ ವಾಟಿಕಾ "ವರ್ಷದ ಕನ್ನಡಿಗ"....

ಇಂತಹ ಸದಭಿರುಚಿಯ ಕಾರ್ಯಕ್ರಮಗಳನ್ನು ನಮಗೆ ನೀಡಿದ್ದ ನಮ್ಮ ಚಾನೆಲ್ ನಲ್ಲಿ ಇಂದು ಎಲ್ಲವೂ "ಬಿಗ್ ಬಾಸ್" ಮಾಯ.
F.D.I ಭಾರತಕ್ಕೆ ಬಂದರೆ ನಮ್ಮ ಚಿಲ್ಲರೆ ವ್ಯಾಪರಿಗಳಿಗಾಗುವ ಗತಿ ಬಿಗ್ ಬಾಸ್ ನಿಂದ ಉಳಿದ ಕಾರ್ಯಕ್ರಮಗಳಿಗಾಗಿದೆ.
ಬೆಳೆದಿರುವ ಸಂವಹನ (Communication) ಕ್ಷೇತ್ರದಲ್ಲಿ ಹೊಸ ಹೊಸ ಚಾನೆಲ್ ಗಳು ನೀಡುತ್ತಿರುವ ಪೈಪೋಟಿಗೆ ಸರಿಯಾದ ಉತ್ತರವೆನನ್ನೋ ಈ ಟಿವಿ ಬಿಗ್ ಬಾಸ್ ನಿಂದ ನೀಡಿದೆ. ಇದರಿಂದ ದೊರೆಯುತ್ತಿರುವುದು ಕೇವಲ ಮನೋರಂಜನೆ. ಒಳಗಿರುವ ಸ್ಪರ್ಧಿಗಳಿಗೆನೋ ತಮನ್ನು ತಾವು ಅರ್ಥ ಮಾಡಿಕೊಳ್ಳಲು, ತಿದ್ದಿ ನಡಿಯುವ ಉತ್ತಮ ಅವಕಾಶ. ನಮಗೆ ನಮ್ಮ ವ್ಯಕ್ತಿತ್ವದ ಅಭಿವೃದ್ದಿಗೆ ಆಗುವ ಪ್ರಯೋಜನ? ಶೂನ್ಯ !!!

ಮೇಲೆ ಹೇಳಿದ ಹಲವಾರು ಕಾರ್ಯಕ್ರಮಗಳಿಂದ ದೊರೆಯುತ್ತಿದ್ದ ಜ್ಞಾನ,ಸೂಕ್ಷ್ಮತೆ,ಸಾಹಿತ್ಯ ಕಲೆ,ಸಂಗೀತ,ಬೆಳೆಯುವ ಮಕ್ಕಳಿಗೆ ನೀಡುತ್ತಿದ್ದ ಅಭಿರುಚಿ,ಸಾಮಾಜಿಕ ಕಳಕಳಿ ಇವೆಲ್ಲವುಕ್ಕೂ ಪೂರ್ಣ ವಿರಾಮ ಬಿದ್ದಂತೆ ಆಗಲ್ಲಿಲ್ಲವೇ.

ಆಗ್ರಾ ರಾಷ್ಟ್ರೀಯ ವಾರ್ತೆಯನ್ನೇ ನಿಲ್ಲಿಸುವಂತಹ ಸ್ಥಿತಿ ಈ ಟಿವಿ ಗೆ ಏಕೆ ಬಂತು. ಲೇಖನದ ಮೊದಲ್ಲಲ್ಲಿ ಹೇಳಿದ Idelogical shift ಏನಾದರು ಚಾನೆಲ್ ನಲ್ಲಿ ಆಗುತ್ತಿದೆಯೇ?

"ಬದಲಾವಣೆ ಜಗದ ನಿಯಮ" ನಿಜ. ಆದರೆ ನಮ್ಮ ಬೇರನ್ನೇ ಅಲುಗಾಡಿಸಲು ನಾವು ಆ ಬದಲಾವಣೆಯ ಬಿರುಗಾಳಿಗೆ ಅವಕಾಶವನ್ನು ಕೊಡಬಾರದಲ್ಲವೇ ?

ನಾನೇನು ಬಿಗ್ ಬಾಸ್ ವಿರೋಧಿಯಲ್ಲ. ನಾನು ಬಿಗ್ ಬಾಸ್ ವೀಕ್ಷಕನೆ.
ಬೇರೆ ಚಾನೆಲ್ ಗಳ ಟಿ ಆರ್ ಪಿ ಇಳಿಸುವಂತಹ ಬಿಗ್-ಬಾಸ್ ಸಹ ಬರಲಿ; ಹಾಗೆಯೇ ಹಳೆಯ ಈ ಟಿವಿ ಮತ್ತೆ ನಮ್ಮ ಚಾನೆಲ್ ಆಗಲಿ.