Saturday, September 06, 2014

ಆಗಸ್ಟ್ 15 ರ ಆಲೋಚನೆ . . .

ಪ್ರಾಯಶಃ ಬರವಣಿಗೆಯೇ ಹೀಗೆ. ಸದಾ ಬರೆಯುತ್ತಿದ್ದರೆ ನಮ್ಮಲ್ಲಿ ಹೊಸ ಹೊಸ ಆಲೋಚನೆ ಚಿಂತನೆಗಳು ವಿಷಯಗಳು ಹೊಳೆಯುತ್ತಿರುತ್ತವೆ, ಇಲ್ಲದೆ ಹೋದರೆ ಬರವಣಿಗೆ ಬಡವಾಗಿಬಿಡುತ್ತದೆ ಎಂದೆನಿಸುತ್ತದೆ. ಬಹಳ ದಿನಗಳ ನಂತರ ಮತ್ತೊಂದು ವಿಷಯ ನನ್ನನ್ನು ಕಾಡಿ ಈ ಲೇಖನಕ್ಕೆ ಮುಂದಾಗಿಸಿತು.

ಸದ್ಯಕ್ಕೆ ನಾನು ಕಾರ್ಯನಿಮಿತ್ತ ಓಮನ್ ದೇಶದ ಸೋಹರ್ ಎನ್ನುವ ಊರಿನಲ್ಲಿದ್ದೇನೆ. ಅದು ಆಗಸ್ಟ್ ೧೫ ರ ದಿನ. ಓಮನ್ ದೇಶದ ಕಾಲಮಾನದಲ್ಲಿ ಮುಂಜಾನೆ ೫ ೩೦. ಓಮನ್, ಭಾರತದ ಕಾಲಮಾನಕ್ಕೆ ೧ ೩೦ ಗಂಟೆ ಹಿಂದೆ. ಪ್ರಧಾನ ಮಂತ್ರಿಯ ಕೆಂಪು ಕೋಟೆಯ ಧ್ವಜಾರೋಹಣವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬೇಕೆಂದು, ಅವರ ವಾಗ್ಜರಿಯ ಭಾಷಣವನ್ನು ಕೇಳಬೇಕೆಂದು ಮುಂಜಾನೆಯೇ ದೂರದರ್ಶನದ ಎದುರಿಗೆ ಹಾಜರಿಯಾಗಿದ್ದೆ. ಅದು ಪ್ರಧಾನಮಂತ್ರಿ ಪ್ರಧಾನ ಸೇವಕನಾದ ದಿನ. ಎಂದಿನಂತೆ ಸರ್ಕಾರದ ಘೋಷಣೆಗಳಿಗೆ ಸೀಮಿತವಾಗಿರದೆ ಭಾರತದ ಸಾಮಾನ್ಯರಲ್ಲಿ ಸಾಮಾನ್ಯನಿಗೆ ಅನ್ವಯವಾಗುವಂತಹ ಮಾತುಗಳು ಮೂಡಿದವು. ಮೌಲ್ಯಗಳು ಕುಸಿಯುತ್ತಿರುವ ಈ ಸಮಯದಲ್ಲಿ ನೈತಿಕತೆಯನ್ನು ಎಚ್ಚರಿಸುವುದು ತಮ್ಮ ಹೊಣೆ ಎಂದು ಪ್ರಧಾನಿ ಭಾವಿಸಿದ್ದು ಸ್ಪಷ್ಟವಾಗಿತ್ತು. ಬುಲೆಟ್ ಪ್ರೂಫ್ ಗಾಜಿನಲ್ಲಿ ನಿಲ್ಲದೆ ತಮ್ಮ ಅಭೂತಪೂರ್ವ ಶೈಲಿಯಲ್ಲಿ ಮಾಡಿದ ಭಾಷಣಕ್ಕೆ ನಾನು ಸಹ ಮಾರುಹೋಗಿದ್ದೆ.

ಶಾಲೆಗಳಲ್ಲಿ ಕಲಿಯುವಾಗ ಇರುವಂತಹ ದೇಶ ಭಕ್ತಿಯ ಆ ಹುಮ್ಮಸ್ಸು ಕೆಲಸಕ್ಕೆ ಸೇರಿದೊಡನೆ ಏನಾಗುವುದು ದೇವರೇ ಬಲ್ಲ.
 ಆಫೀಸ್ ನಲ್ಲಿ ನಡೆಯುವ ಧ್ವಜಾರೋಹಣಕ್ಕೆ ಬರಲಾಗದಂತಹ ಅದ್ಯಾವ ಮಹತ್ತರ ಕಾರ್ಯವಿರುತ್ತದೆಯೋ ನಾ ಕಾಣೆ.
ಧ್ವಜಾರೋಹಣಕ್ಕೆ ಮೂವತ್ತು ಮಂದಿ, ಫೇಸ್ ಬುಕ್ ನಲ್ಲಿ ಅದೇ ಚಿತ್ರಕ್ಕೆ ಲೈಕ್ ಮಾಡುವವರು ಇನ್ನೂರು ಮಂದಿ. ವಾಹ್ !!! ತಾಯಿ ಭಾರತಿ ನೀನೇ ಧನ್ಯಳು.

ಸ್ವಾತಂತ್ರ್ಯೋತ್ಸವದ ಹುಮ್ಮಾಸಿನಲ್ಲಿದ್ದ ನಾನು ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ ದ ಕೆಲವು ಸಂಚಿಕೆಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸಿದೆ.

ಅದೇಕೋ ಆ ದಿನ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಹುಟ್ಟಿತು. ನಮಲ್ಲಿ ಪ್ರತಿದಿನ ಅಲ್ಲದಿದ್ದರೂ, ಆಗಸ್ಟ್ ೧೫ರಂದು ಗಾಂಧಿ, ಬೋಸ್, ಭಗತ್ ಸಿಂಗ್, ಶಾಸ್ತ್ರಿ,ಪಟೇಲ್, ನೆಹರು ಎಲ್ಲರೂ ನೆನಪಾಗುತ್ತಾರೆ. ನಾವೆಲ್ಲ ಓದಿರುವುದು ಇದನ್ನೇ. ಇವರುಗಳು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಎಂದು. ಇದೆಲ್ಲ ಸರಿ ಆದರೆ, ಹಿಂದಿನ ದಿನ ಸ್ವಾತಂತ್ರ್ಯೋತ್ಸವ ಆಚರಿಸಿದ ನೆರೆಯ ಪಾಕಿಸ್ತಾನದಲ್ಲಿಯೂ ಇವರುಗಳನ್ನು ಸ್ಮರಿಸಲಾಗುತ್ತದೆಯೇ ಇಲ್ಲವೇ. ಅಲ್ಲಿನ ಇತಿಹಾಸ ಪಠ್ಯ ಇವರುಗಳಿಗೆ ಸ್ಥಾನವನ್ನಾದರೂ ನೀಡಿದಿಯೆ ಇಲ್ಲವೇ. ಈ ತರಹದ ಸುಮಾರು ಪ್ರಶ್ನೆಗಳು . . . ಓಮನ್ ನಲ್ಲಿ ಪರಿಚವಾಗಿದ್ದ ಕೆಲವು ಪಾಕಿಸ್ತಾನಿಯರನ್ನು ಈ ಬಗ್ಗೆ ಅನೌಪಚಾರಿಕವಾಗಿ ಕೇಳಿದೆ. ದೊರೆತ ಉತ್ತರ ಆಶ್ಚರ್ಯವೇನನ್ನು ತರಿಸಲ್ಲಿಲ್ಲ...ಇಲ್ಲಿ ಮಹಾತ್ಮ ಗಾಂಧಿ ಹೀರೊ ಆದರೇ ಅಲ್ಲಿ ಮೊಹಮ್ಮೆದ್ ಅಲಿ ಜಿನ್ಹಾ. ಗಾಂಧಿಯ ಹೆಸರು ಉಲ್ಲೇಖವಾಗಿದೆ ಎನ್ನುವುದೇ ಸಂತೋಷ. ಎಂತಹ ವಿಪರ್ಯಾಸ ನೋಡಿ ಒಂದೇ ಸ್ವಾತಂತ್ರ್ಯ ಹೋರಾಟ ಆದರೇ ಅಲ್ಲಿ ಒಬ್ಬ ನಾಯಕರು ಇಲ್ಲಿ ಒಬ್ಬ ನಾಯಕರು. ಒಂದು ಇತಿಹಾಸಕ್ಕೆ ಒಂದೇ ಕಥೆ ಇರಲು ಸಾಧ್ಯವಲ್ಲವೇ. ಅಲ್ಲಿಗೆ ಇತಿಹಾಸ ಒಂದು ಸುಳ್ಳಿನ ಕಂತೆಯನ್ನಾಗಿ ಕಲಿಸಲಾಗುತ್ತಿದೆ ಎನ್ನುವುದು ಸತ್ಯ. ದೇಶದ ಉಗಮಕ್ಕೆ ಆತ ಕಾರಣನಿರಬಹುದು ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಗಿಂತ ಹೆಚ್ಚಿನ ಪಾತ್ರ ಆತನದು ಇರಲಾರದು ಅಲ್ಲವೇ. . .

ಇಷ್ಟಕ್ಕೆ ನನಗೆ ತೃಪ್ತಿಯಾಗಲಿಲ್ಲ. ದೇಶ ವಿಭಜನೆಯ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿತು. ಯೂ ಟ್ಯೂಬ್ ನಲ್ಲಿ BBC ಯ "The Day India Burnt" ಎಂಬ ವೀಡಿಯೋ ವನ್ನು ವೀಕ್ಷಿಸಿದೆ. ತುಂಬಾ ಸಡಗರದ ಸಂತೋಷದ ಸ್ವಾತಂತ್ರ್ಯ ದಿನಾಚರಣೆಯ ಮತ್ತೊಂದು ಕರಾಳ ಮುಖವನ್ನು ನೋಡಿ ಮನಸ್ಸಿಗೆ ಖೇದವಾಯಿತು.

 

 


ಧರ್ಮದ ಆಧಾರದಲ್ಲಿ ದೇಶ ವಿಭಜನೆ !!! ಇಂತಹ ಒಂದು ಆಲೋಚನೆ ನೂರಾರು ವರ್ಷಗಳಿಂದ ಜೊತೆಯಾಗಿ ಬಾಳುತ್ತಿದ್ದ ಜನ ತಮ್ಮ ಒಡನಾಡಿಗಳನ್ನೇ ಕೊಲ್ಲಲು ಪ್ರೇರಿಪಿಸಿತ್ತು ಎಂದರೆ ಇನ್ನೆಂತಹ ಕೆಟ್ಟ ಶಕ್ತಿ ಇದ್ದಿರಬೇಡ.
The Great Culcutta Killings, ಆಗಿನ ಕಾಲದಲ್ಲೇ ಜಗತ್ತಿನ ಕಣ್ಣನ್ನು ತನ್ನ ವಿವಿಧತೆಯಿಂದ ತನ್ನೆಡೆಗೆ ಸೆಳೆದುಕೊಂಡಿದ್ದ ಲಾಹೋರ್ ಹಂಚಿಕೆಯ ವಿಷಯಗಳನ್ನು ಆ ವೀಡಿಯೋ ನಲ್ಲಿ ನೋಡುತ್ತಿದ್ದರೆ ಮನ ಮರುಗುತ್ತಿತ್ತು. ಸಿಕ್ಕ ಸಿಕ್ಕ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಕೊಲೆಗೈಯುವುದು, ಸುಲಿಗೆ, ದರೋಡೆ, ಒಂದು ಪ್ರದೇಶಕ್ಕೆ ಬೆಂಕಿ ಹಚ್ಚಿ ಜನರನ್ನು ಕಾಲಿ ಮಾಡಿಸುವುದು,
ಪ್ರಾಣಕ್ಕಿಂತ ಮಾನವೇ ಮುಖ್ಯವೆಂದು ತನ್ನ ಸ್ವಂತ ಮಗಳ ಶಿರಸ್ಚೇದನ ಮಾಡುವ ತಂದೆ, ಈ ವಿಷಯಗಳು ಕೇಳುವುದಕ್ಕೆ ಭಾಯನಕವಾಗಿತ್ತು.

 


ಐವತ್ತು ಮೈಲಿ ಉದ್ದದ ಮನುಷ್ಯರ ಸಾಲು . . . ನಾವುಗಳು ಗಳಿಸಿದ ವಸ್ತುಗಳಲ್ಲಿ ಒಂದನ್ನು ಕಳೆದುಕೊಂಡರೆ ಎಷ್ಟು ಮರಗುತ್ತೇವೆ, ಅಂತಹುದರಲ್ಲಿ ಅದಿನೈದು ಮಿಲಿಯನ್ ಜನ ತಾವು ಗಳಿಸಿದ್ದ, ತಮ್ಮ ಪೂರ್ವಜರು ಗಳಿಸಿದ್ದ ಆಸ್ತಿ ಪಾಸ್ತಿ ಗಳನೆಲ್ಲ ತಮ್ಮದು ಅಲ್ಲವೇನು ಎಂಬಂತೆ ತ್ಯಜಿಸಿ, ನಿರ್ಗತಿಕರಾಗಿ ಮತ್ತೊಂದು ಜಾಗಕ್ಕೆ ಸ್ಥಾನ ಪಲ್ಲಟವಾದರು. ಈ ಸಮಯದಲ್ಲಿ ಒಂದು ಮಿಲಿಯನ್ ಮಂದಿ ಧರ್ಮದಳ್ಳುರಿಯಲ್ಲಿ ಜೀವವನ್ನೇ ಕಳೆದುಕೊಂಡರು ಎಂದರೆ ಇದಕ್ಕಿಂತ ಮನಕಲಕುವ ದೃಶ್ಯ ಮತ್ತೊಂದು ಇರಲಾಗದು ಅಲ್ಲವೇ. . . ನಿಜಕ್ಕೂ ಮನುಷ್ಯತ್ವ ಸತ್ತ ದಿನ ಅದೇ ಇರಬೇಕು. ತನ್ನದು ತನ್ನವರೆಲ್ಲರನ್ನು ಕಳೆದುಕೊಂಡ ಜೀವಕ್ಕೆ ಮಾತ್ರ ಅದರ ನಿಜವಾದ ಸಂಕಟವೇನು ಎಂಬುದು ತಿಳಿದಿರುವುದಕ್ಕೆ ಸಾಧ್ಯ. ಪ್ರಾಯಶಃ ಭಾಗ್ ಮಿಲ್ಕಾ ಭಾಗ್ ಚಿತ್ರ ನೋಡಿರುವ ಎಲ್ಲರಿಗೂ ಇಂತಹ ದೃಶ್ಯ  ಸಂಕಟವನ್ನು ತಂದಿರುತ್ತದೆ.

ಒಬ್ಬ ಲೀಡರ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಇರುವ ಮಹತ್ವ ವನ್ನು ಮನಗಾಣಲು ಈ ಘಟನೆಗಿಂತ ಮತ್ತೊಂದು ಉದಾಹರಣೆ ಬೇಕಿಲ್ಲವೆನಿಸುತ್ತದೆ.

ಸರಿ ಸುಮಾರು ಮುನ್ನೂರು ವರ್ಷಗಳ ದಾಸ್ಯದ ವಿರುದ್ದ ಯಾವುದೇ ಧರ್ಮ ಜಾತಿಗಳ ತಾರತಮ್ಯವಿಲ್ಲದೆ ಹೋರಾಡಿದ್ದ ನಾವುಗಳು ನಮ್ಮ ಅಖಂಡತೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಇದಕೆಲ್ಲ ಕಾರಣ ಧರ್ಮಾಂದ ಜಿನ್ಹಾ ನೇ . . .  ಅಧಿಕಾರ ಲಾಲಸಿಯಾಗಿದ್ದ ನೆಹರು ನೇ . . . ನೂರಾರು ವರ್ಷಗಳಿಂದ ನಮಲ್ಲಿ ಇದ್ದ ಜಾತೀಯತೆಯ ಅಸ್ಪೃಶ್ಯತೆ ಜಿನ್ಹಾನಿಗೆ ಸ್ಪೂರ್ತಿಯಾಗಿತ್ತೆ . . . ಈ ನಿರ್ಧಾರಕ್ಕೆ ಎಲ್ಲ ನಾಯಕರ ಒಪ್ಪಿಗೆ ಇತ್ತೇ. ಇದರ ಮುಂದಾಗುವ ಪರಿಣಾಮ ಯಾವುದೇ ನಾಯಕನ ಅರಿವಿಗೆ ಬಂದಿರಲ್ಲಿಲ್ಲವೇ. ನಮ್ಮ ಜನಗಳಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ್ದ ನಾಯಕರುಗಳು ನಮಲ್ಲಿ ಧರ್ಮ ಸಹಿಷ್ಣುತೆ,ಒಗ್ಗಟ್ಟಿನ ಪಾಠವನ್ನು ಸರಿಯಾಗಿ ಕಲಿಸಿರಲಿಲ್ಲವೇ  . . . ಗಾಂಧಿಯ ಪ್ರಭಾವ ಅಷ್ಟು ಸ್ತಿಮಿತವಾಗಿತ್ತೆ . . .
ಈಗ ಕೊಡುತ್ತಿರುವ ಅಲ್ಪ ಸಂಖ್ಯಾತ ರಿಸರ್ವೇಶನ್ಸ್ ಆಗಲೇ ಅಧಿಕಾರದಲ್ಲಿ ಕೊಟ್ಟಿದ್ದರೆ ದೇಶ ವಿಭಜನೆಯನ್ನು ತಡೆಯಬಹುದಿತ್ತೆ.

ಒಂದೇ ಒಂದು ಸಲ ಆಲೋಚಿಸಿ ಅಖಂಡ ಭಾರತವಿದ್ದಿದ್ದರೆ ಹೇಗಿರುತ್ತಿತ್ತು. ಹಿಂದೂ ಮುಸ್ಲಿಂ ಬಂಧುಗಳು ಪರಸ್ಪರ ದ್ವೇಷಿಸುವ ಪ್ರಮೇಯವೇ ಬರುತ್ತಿರಲಿಲ್ಲ. ೧೯೭೧, ಕಾರ್ಗಿಲ್ ಯುದ್ದಗಳೇ ಸಂಭವಿಸುತ್ತಿರಲ್ಲಿಲ್ಲ. ಎಷ್ಟು ಸೈನಿಕರ ಪ್ರಾಣ ಉಳಿದಿರುತ್ತಿತ್ತು. ಪ್ರಪಂಚದ ಯಾವುದೇ ಶಕ್ತಿಗೆ ಸಾವಾಲು ಎಸೆಯಬಲ್ಲ ಶಕ್ತಿಯುತ ರಾಷ್ಟ್ರವಾಗಿರುತ್ತಿತ್ತು ಅಖಂಡ ಭಾರತ.
ಇದೆಲ್ಲವನ್ನೂ ಬಿಡಿ, ಭಯೋತ್ಪಾದನೆ ಎನ್ನುವ ಪಿಡುಗೇ ಇರುತ್ತಿರಲಿಲ್ಲ.

ಸದಾ ಗುಂಡಿನ ಶಬ್ದವೇ ಝೇಂಕರಿಸುತ್ತಿರುವ ಕಾಶ್ಮೀರ ವಿಶ್ವ ಪ್ರಸಿದ್ದ ಪ್ರವಾಸಿ ತಾಣವಾಗಿರುತ್ತಿತ್ತು. ಕಾಶ್ಮೀರಿ ಪಂಡಿತರ ಪದ್ಯಗಳು ಹಿಮಾಲಯದಲ್ಲಿ ಶಾಂತಿಯಿಂದ ಪ್ರತಿಧ್ವನಿಸುತ್ತಿದ್ದವು ಎಂದು ಅನ್ನಿಸುವುದಿಲ್ಲವೇ . . .

ಮಠದ ತಿಪ್ಪೇಸ್ವಾಮಿ ವಿನಯ್
ಸ್ಥಳ: ಸೊಹರ್,
ದೇಶ: ಓಮನ್
ದಿನಾಂಕ: ಸೆಪ್ಟೆಂಬರ್ ಆರು ೨೦೧೪.
ಮಧ್ಯರಾತ್ರಿ ೧೨:೪೪.


 

3 comments:

  1. Very mediocre article Mr.Vinay. anyway nice to read once. but at last I felt like "Addagode mele deepa ittange ". please write something with core solution also. questioning is not big deal, everyone do that, but giving solution at the same time, few wil do. thanks for wasting my five minute.

    ReplyDelete
  2. Indeed its a Good Start. I like the way you have put your thoughts here. I don't believe all the articles to be conclusive. Its author's view and i equally respect it.

    ReplyDelete
  3. Nice article Vinay. Keep posting.

    ReplyDelete