Saturday, January 26, 2013

ಸದಾ ಕಾಡುವ ಅನುಪಸ್ಥಿತಿ .....

ಏಕೋ ಏನೋ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ,
ಇಲ್ಲದ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಊರಿಂದ ನಾ ಬಂದು, ಬಾಗಿಲಲಿ ನಿಂತಾಗ,
ಕೈ ಚೀಲ ಕಸಿದು, ಉಡುಗೊರೆಯ ಹುಡುಕಲು,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ಅಮ್ಮ ಕೊಡುವ ತಿಂಡಿಯ ಸಮಪಾಲು ಕೇಳಲು,
ಟಿ.ವಿ ರಿಮೋಟಿಗೆ ಕಚ್ಚಾಡಲು,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ತನ್ನ ಸಹೋದರಿಯ ಹುಟ್ಟು ಹಬ್ಬಕ್ಕೆ
ಉಡುಗೊರೆ ಕೊಳ್ಳುವ ಸ್ನೇಹಿತನ ಜೊತೆ ಹೋದಾಗ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ನನ್ನ ತಂಗಿ ನನ್ನಂತೆಯೇ ಜಾಣೆ,
ನನ್ನನ್ನೇ ಮೀರಿಸಿ ಗುರಿಯೊಂದನ್ನು ಸಾಧಿಸಿದ್ದಾಳೆ
ಎಂದು ಬೀಗುವ ಸ್ನೇಹಿತನ ಹೆಮ್ಮೆಯ ಮಾತನ್ನು ಕೇಳಿದಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಶ್ರಾವಣ ಮಾಸದ ಪೌರ್ಣಮಿದಿನದಂದು,
ರಾಖಿ ಕಟ್ಟುವ ಸಹೋದರಿಯರ ಕಂಡಾಗ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ಸೀರೆ ಧರಿಸಿ, ದೀಪಾವಳಿಯಲ್ಲಿ ಮನೆ ಬೆಳಗಿಸುವ,
ಸಂಕ್ರಾಂತಿಯಲಿ ಎಳ್ಳು-ಬೆಲ್ಲ ಬೀರುವ ಗೆಳತಿಯರ ಕಂಡಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಸಹೋದರನ ಸುಖದಲ್ಲಿ ಸಂಭ್ರಮಿಸುವ,
ದುಃಖದಲಿ ಸಂತೈಸುವ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ತಂಗಿಯ ವಿವಾಹದ ನಂತರವೇ ನನ್ನದು !!!
ಎನ್ನುವ ಗೆಳಯರ ಜವಾಬ್ದಾರಿಯ ಕುರುಹನ್ನು ಕಂಡಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಏಕೋ ಏನೋ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ,
ಅಮ್ಮನ ಬಳಿ ನನಗೊಬ್ಬಳು ತಂಗಿ ಇರಬೇಕಿತ್ತು ಎಂದು ಪೇಚಾಡುವಾಗ,
ಇಲ್ಲದ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

4 comments:

  1. Sagar atleast you have brothers :P

    ReplyDelete
  2. tumba chenagide kano:)soo sweet..:) nijavaglu hudgarige ishtond feelings irutte anta ivatte gottagiddu nange..:P

    ReplyDelete
  3. loved it Sir!! but I got one sister in my college.:)

    ReplyDelete