ನಮ್ ಗಂಗಾವತಿ ಬಿ.ಚಿ (ಪ್ರಾಣೇಶ್ ) ಪದೇ ಪದೇ ಒಂದ್ ಮಾತ್ ಹೇಳ್ತಾರ್ ನೋಡ್ರಿ . ಅದೇನಪ್ಪಾ ಅಂದ್ರೆ " ಬದುಕನ್ನ ಅರ್ಥ ಮಾಡ್ಕೊಬೇಕಂದ್ರ ಭೈರಪ್ಪನವರ ಕೃತಿಗಳನ್ನ ಓದಬೇಕು ಸ್ನೇಹಿತರೆ ಅಂತ ". ಅವ್ರ ಮಾತ್ನಾಗೆ ಎಂತ ಸತ್ಯ ಇದೆ ಅಂತೀರ ; ಅದು ಓದೋರ್ಗೆ ತಿಳಿಯೋದು ...
ಇದುವರೆಗೂ ಗೃಹಭಂಗ, ಆವರಣ ಎರಡನ್ನು ಓದಿದ್ದೇನೆ .
1940ರ ಭಾರತ ಚಿತ್ರಣ, ಹೆಣ್ಣು ಜೀವನದಲ್ಲಿ ಎದುರಿಸುವ ಸಂಸಾರಿಕ ಸವಾಲುಗಳು, ಗ್ರಾಮೀಣ ಸೊಗಡು, ತಾಯಿ-ಮಕ್ಕಳ ಕರುಳ ಸಂಬಂಧ,ಸನ್ಯಾಸಿಯು ಭಾವ ಬಂಧನಕ್ಕೆ ಒಳಗಾಗುವ ಪರಿ ಇವೆಲವುಕ್ಕೆ ಗೃಹಭಂಗ ಓದಲೇಬೇಕಾದ ಕೃತಿ. ಕೃತಿಯ ಮುನ್ನುಡಿಯಲ್ಲಿರುವಂತೆ ಗೃಹಬಂಗ "ಬದುಕಿಗೆ ಬದುಕೇ ಬರೆದ ಭಾಷೆ ... ".
ಇನ್ನು ಆವರಣ . ನಾನು ಹೇಳೋದೇ ಬೇಡ. ಆ ಕೃತಿಯ ಚರ್ಚೆಯೇ ಅನೇಕ ಪುಸ್ತಕಗಳಾಗಿ ಪ್ರಕಟವಾಗಿವೆ. ರಜಿಯ(ಲಕ್ಷ್ಮಿ)ಯಾಗಿ ತನ್ನ ವಾದವನ್ನು ಮಂಡಿಸುವ ಪರಿ ವಿಶಿಷ್ಟ. ಓದುವಾಗ ಒಂದನ್ನಿಸಿದ್ದು "ಇತಿಹಾಸ ಇಷ್ಟು ಕಟೋರವಾಗಿತ್ತೆ !!!!" ಎಂಬುದು. ಯಾವುದೇ ಸಂಬಂಧ(ಸಮಾಜದ ಭ್ರಾತೃತ್ವ ಸೇರಿ) ಸತ್ಯದ ತಳಹದಿಯ ಮೇಲೆ ನಿಲ್ಲಬೇಕು ಎಂಬ ವಾದಕ್ಕೆ ನನ್ನ ಸಹಮತವುಂಟು.ಕೃತಿಯನ್ನು ಓದಿ ಯಾವುದೇ ಧರ್ಮವನ್ನು ದ್ವೇಷಿಸಬಾರದು, ಕೃತಿಯ ಉದ್ದೇಶವನ್ನರಿಯಬೇಕು ಎಂಬುದು ನನ್ನ ಅಭಿಪ್ರಾಯ...
ಎರಡರ ನಂತರ ಮುಂದೆ... ಓದಬೇಕೆನಿಸಿದ್ದು "ಕವಲು".
ತಂತ್ರಾಂಶ ಅಭಯಂತರನಾಗಿ ಎಲ್ಲರ ಹಾಗೆ ನಾನು ಮೊದಲು ಮಾಡಿದ್ದು ಗೂಗಲ್ ಸರ್ಚ್. ಭೈರಪ್ಪನವರ ಮಟ್ಟದ ಕೃತಿಯಲ್ಲ ಎಂಬ ಅಭಿಪ್ರಾಯಗಳು..ಆದರೂ ಓದಲೆಬೇಕೆಂಬ ಆಸೆಯಿಂದ ಕೃತಿ ಕೊಂಡು ಓದಿದ್ದಾಯಿತು...
"ಕವಲು" ಆಧುನಿಕ ಭಾರತದ ಸಾಮಾನ್ಯ ಮುಖವಲ್ಲ . ಆದರು ಅದು ನಮ್ಮ ಸಮಾಜದ ಒಂದು ಮುಖ . ಈ 21 ನೆ ಶತಮಾನವನ್ನು ಬಿಂಬಿಸುವ ಕೈಗನ್ನಡಿ.
ಶಿಕ್ಷಣಕ್ಕಿರುವ ಶಕ್ತಿ ಈ ಕೃತಿಯಿಂದ ಮತ್ತೊಮ್ಮೆ ಸಾಬೀತಾಗುತ್ತದೆ. ಪಾಶ್ಚಿಮಾತ್ಯ ಜೀವನ ರೀತಿ, ತತ್ವಗಳಿಗೆ ಮನಸೋತು ನಮ್ಮ ಪದ್ದತಿಗಳನೆಲ್ಲ ತುಚ್ಚಿಕರಿಸುವ ಶಿಕ್ಷಕಿ(ಇಳಾ) ಹಾಗು ಅವಳ ಶಿಷ್ಯೆ(ಮಂಗಳ) ಇವರುಗಳ ಸುತ್ತಲು ಕಥೆ ನಡೆಯುತ್ತದೆ .
ಹೆಣ್ಣು,ಹೊನ್ನು,ಮಣ್ಣಿನ ಹಿಂದೆ ಹೋಗಬೇಡಿರೋ ಹುಚ್ಚಪಗಳಿರ ಎಂಬ ದಾಸವಾಣಿಯನ್ನು ಮರೆತ ಗಂಡು ಕೀರ್ತಿಯ ಉತ್ತುಂಗದಿಂದ ವಿನಾಶದ ಪ್ರಪಾತಕ್ಕೆ ಬೀಳುವ ಪಾತ್ರವೂ(ಜಯಕುಮಾರ್) ಪ್ರಮುಖ ಪಾತ್ರಗಳಲ್ಲಿ ಒಂದು.
ಕೃತಿಯಲ್ಲಿ "ತಾಯಿಯಂತೆ ಮಗಳು ನೂಲಿನಂತೆ ಸೀರೆ" ಎಂಬ ಗಾದೆ ಒಮ್ಮೆ ಸತ್ಯವಾಗಿ(ವೈಜಯಂತಿ ಹಾಗು ವತ್ಸಲರಲ್ಲಿ) ಮತ್ತೊಮ್ಮೆ ಮಿಥ್ಯವಾಗಿ(ಇಳಾ ಹಾಗು ಪುಟ್ಟಾಣಿ) ಮೂಡಿದೆ.
ಹಳ್ಳಿಯಲ್ಲಿನ ಒಟ್ಟು ಕುಟುಂಬದ ರೀತಿ,ಅಲ್ಲಿನ ಪರಿಸರ,ಸಂಬಂಧಗಳಿಗೆ ಅಲ್ಲಿರುವ ಪ್ರಾಧಾನ್ಯತೆ(ವಿನಯ್ ಕುಮಾರ್ ನ ಸಂಸಾರ) ಈ ಅಂಶಗಳು ಹಳ್ಳಿಯ ಮೂಲದವನಾದ ನನಗೆ ಇಷ್ಟವಾಯಿತು.
ಮೇಲೆ ಹೇಳಿದ ಎಲ್ಲ ಅಂಶಗಳು ಕಥಾ ಪೋಷಣೆಯಲ್ಲಿ ಕಾದಂಬರಿಕಾರರು ಬಳಸಿಕೊಂಡಿರುವ ವಿಶೇಷತೆಗಳು ಅಷ್ಟೇ.ಕಾದಂಬರಿಯಲ್ಲಿ ಸಮಾಜದ ಅನ್ಯಾಯ ಹಾಗು ಅನೇಕ ಪಿಡುಗುಗಳನ್ನು ತೊಳೆಯಲ್ಲೆಂದು ರಚನೆಯಾದ ಕಾನೂನುಗಳು ಹೇಗೆ ಮತ್ತೊಬರಿಗೆ ತೊಂದರೆಕೊಡಲೆಂದು ಉಪಯುಕ್ತವಾಗುತ್ತಿವೆ ಎಂಬುದೇ ಕಥೆಯ ಮೂಲವಸ್ತು.
ವರದಕ್ಷಿಣೆ, ಕೌಟುಂಬಿಕ ಕಲಹ, ವಿವಾಹ ವಿಚ್ಚೇದನ ಹೀಗೆ ಹಲವಾರು ಕಾನೂನುಗಳನ್ನು ಅವುಗಳ ದುರುಪಯೋಗವನ್ನು ಸವಿಸ್ತಾರವಾಗಿ ಲೇಖಕರು ಚಿತ್ರಿಸಿದ್ದಾರೆ.
ನಾವುಗಳು ಯಾವುದೇ ಸಂಭಂದವನ್ನು ಸಂಬೋದಿಸುವ ಪದ ಆ ಸಂಬಂಧದ ಗಾಡತೆಯನ್ನು ಹೆಚ್ಚಿಸುತ್ತದೆ. ಚಿಕ್ಕಪನ ಮಗನಿದ್ದರೆ ಅವನು ನಮಗೆ ಅಣ್ಣ ಅಥವ ತಮ್ಮ ಆಗಿರುತ್ತಾನೆ. ಅವನನ್ನು ನಾವು ಕಸಿನ್ ಎಂದು ಕರೆಯಬಹುದು. ಕಾದಂಬರಿ ಓದಿದ ಮೇಲೆ "ಅಣ್ಣ/ತಮ್ಮ" ಪದದ ಮುಂದೆ "ಕಸಿನ್" ಮಂಕಾಗಿ ಕಾಣುತ್ತದೆ.
ಸಾಂಸಾರಿಕ ಜೀವನದಲ್ಲಿ ಎಲ್ಲ ಸಮಸ್ಯೆಗಳಿಗೆ ಕಾರಣ "ಕವಲಿನ" ಪ್ರಕಾರ ನನಗನಿಸಿದ್ದು ಅಹಂಕಾರ.
ವಿದ್ಯೆ ಮನುಷ್ಯನ ಅನುಭವವನ್ನು ಹೆಚ್ಚಿಸುತ್ತದೆ.
ಯಾವುದೇ ದೇಶ ಹಾಗು ಜೀವನ ರೀತಿ-ನೀತಿಗಳನ್ನು ಕಂಡಾಗ ಅವುಗಳನ್ನು ವಿಮರ್ಶಿಸಿ ನಮ್ಮ ಅನುಭವನ್ನು ಹೆಚ್ಚಿಸಿಕೊಬೇಕೆ ವಿನಹ ಅಲ್ಲಿರುವ ಎಲ್ಲ ನಡೆಗಳನ್ನು ನಮ್ಮ ಸಮಾಜದಲ್ಲಿ ರೂಡಿಗೆ ತರುತ್ತೇವೆ ಎನ್ನುವುದು ಮೂರ್ಖತನವಾಗುತ್ತದೆ. (ಒಳ್ಳೆಯದನ್ನು ಒಪ್ಪಿಕೊಳ್ಳೋಣ ಆದರೆ ಭಾರತವನ್ನು ಇಂಗ್ಲೆಂಡ್ ಅಮೇರಿಕಾ ಮಾಡಲು ಹೊರಟರೆ ಅಷ್ಟೇ ಇಳಾ -ಮಂಗಳಗಾಗುವ ಗತಿಯೇ ನಮಗೂ; ಇತ್ತ ಸಂಸಾರವೂ ಇಲ್ಲ ಅತ್ತ ಸಮಾಜವೂ ಇಲ್ಲ....)
ಪ್ರತಿಯೊಂದು ದೇಶಕ್ಕೆ,ಸಮಾಜಕ್ಕೆ,ಸಂಸ್ಕೃತಿಗೆ ತನದೇ ಆದ ವಿಶೇಷತೆ, ಗಟ್ಟಿತನವಿರುತ್ತದೆ.
ಆ ಹೆಮ್ಮರದ ಬೇರುಗಳು ಅಷ್ಟು ಸುಲಭವಾಗಿ ಕತ್ತರಿಸಿ ಹೋಗುವಂತದಲ್ಲ. ನಾವು ಅದಕ್ಕೆ ಕೈ ಹಾಕಲೂ ಬಾರದು, ಏಕೆಂದರೆ ಅದೊಂದು ಆಚಾರ-ವಿಚಾರ, ಸಂಸ್ಕೃತಿಯ ವಿನಾಶದ ಪ್ರಯತ್ನ.
ಒಂದು ವೇಳೆ ಕಾಲಾಂತರದ ಸುಳಿಯಲ್ಲಿ ಆ ಬೇರುಗಳು ಸಡಿಲಗೊಂಡರು ಅದನ್ನು ಗಟ್ಟಿಗೊಳಿಸುವ ಸಾಮಾಜಿಕ ಜವಾಬ್ದಾರಿ ನಮ್ಮದಾಗಬೇಕು ಎಂಬು ಓದುಗನಾಗಿ ನನ್ನ ಅಭಿಪ್ರಾಯ...

No comments:
Post a Comment