Saturday, June 22, 2013

ಈ ಟಿವಿ ಕನ್ನಡ ... ಇದು ನಮ್ಮ ಚಾನೆಲ್ ...

ಸುಧಾಮೂರ್ತಿಯವರ "ಏರಿಳಿತದ ದಾರಿಯಲ್ಲಿ" ಪುಸ್ತಕದ ಕಥೆ ಎಂಬ ನೆನಪು ...
ಒಬ್ಬ ಧರ್ಮಾತ್ಮ ಯಾವುದೇ ಪ್ರತಿಫಲವನ್ನು ಬಯಸದೆ ಸುಧಾರವರ ಸಮಾಜ ಸೇವೆಗೆ ಸಹಾಯ ಮಾಡುತ್ತಿರುತ್ತಾನೆ.
ಆತ ಕಾಲವಾದ ನಂತರ ಅಧಿಕಾರ ವಹಿಸಿಕೊಳ್ಳುವ ಆತನ ಮಗ ಸುಧಾರವರಿಗೆ ನೀವು ನಮಗೆ ಮೋಸ ಮಾಡುತ್ತಿದ್ದಿರೆಂದು ನಮ್ಮ ಸಹಾಯ ಮುಂದುವರೆಯಬೇಕಾದರೆ ನಮ್ಮ ಕಂಪನಿಯ ಹೆಸರನ್ನು ಜಾಹಿರಾತಿನಲ್ಲಿ ಪ್ರಕಟಿಸಬೇಕೆಂದು ಒತ್ತಾಯಿಸುತ್ತಾನೆ.
ಇಲ್ಲಿ ಏನಾಯಿತೆಂದರೆ "Idelogical shift". ಕಾರ್ಯವೈಖರಿ,ನಿಲುವು ಧೋರಣೆ ಎಲ್ಲವು ಭಿನ್ನ..
ಇದನ್ನು ಇಲ್ಲೇಕೆ ಪ್ರಸ್ತಾಪಿಸಿದೆ ಎಂಬುದು ಕೆಳಗಿನ ಲೇಖನ ಓದಿದ ಮೇಲೆ ತಿಳಿಯುತ್ತದೆ.

ಒಂದು ದಶಕದ ಹಿಂದಿನ ಮಾತು . ಪಟ್ಟಣದ ಸ್ಥಿತಿ ನನಗೆ ಗೊತ್ತಿಲ್ಲ ಆದರೆ ನಾನಿದ್ದ ಹಳ್ಳಿಯಲ್ಲಿ,ಅಲ್ಲಿನ ಕಿರುತೆರೆಯಲ್ಲಿ ಬರುತ್ತಿದದ್ದು ಕೆಲವೇ ಕೆಲವು ಚಾನೆಲ್ ಗಳು.ಅದರಲ್ಲೂ ಆಂಧ್ರದ ಗಡಿಗೆ ಹತ್ತಿರವಿರುವ ನಮಲ್ಲಿ ಕೇವಲ ಕನ್ನಡ,ತೆಲುಗು,ಒಂದೋ ಎರಡೋ ಹಿಂದಿ ಚಾನೆಲ್ ಗಳು (ಡಿ ಡಿ ೧ ಸೇರಿ) ಬರುತ್ತಿದ್ದವು.              
                   

ಅದೊಂದು ಭಾನುವಾರವೆಂಬ ನೆನಪು. ಕೇವಲ ಚಂದನ,ಉದಯ ಟಿವಿ ಇದ್ದ ಕನ್ನಡದ ಚಾನೆಲ್ ಗಳ ಪಟ್ಟಿಗೆ ಒಂದು ಹೊಸ ಚಾನೆಲ್ ಸೇರ್ಪಡೆಯಾಗುತ್ತಿತ್ತು. ಹತ್ತು ಗಂಟೆ ಅಥವಾ ಹನ್ನೊಂದು ಗಂಟೆ ಅನಿಸುತ್ತದೆ. ೫ ನಿಮಿಷದ ವಾರ್ತೆಯೊಂದಿಗೆ ಪ್ರಾರಂಭವಾಗಿ,ರಾಜ್ ಅಭಿನಯದ ಗಂಧದ ಗುಡಿ ಚಲಚಿತ್ರವನ್ನು ಪ್ರಸಾರ ಮಾಡಿತ್ತು. ಈ ಚಾನೆಲ್ ತನ್ನ ಉತ್ತಮ ಅಭಿರುಚಿಯ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲರ ಮನಗೆದ್ದಿತು.

ಈ ಚಾನೆಲ್ ನಲ್ಲಿ ನಾನು ನೋಡಿ ಬೆಳೆದ ಕೆಲವು ಕಾರ್ಯಕ್ರಮಗಳನ್ನು ಇಲ್ಲಿ ಉಲ್ಲೇಖಿಸುತ್ತಿದೇನೆ.
"ಅನ್ನದಾತ",
"ಅಗ್ರ ರಾಷ್ಟ್ರೀಯ ವಾರ್ತೆ"
(ಪ್ರಭಾವ-ಪಕ್ಷಪಾತವಿಲ್ಲದ ನ್ಯೂಸ್; ಇಂದು ಕನ್ನಡ ಒಂದರಲ್ಲೇ ೫-೬ ನ್ಯೂಸ್ ಚಾನೆಲ್ ಗಳಾಗಿವೆ. ಇವುಗಳಲೆಲ್ಲ ಇರುವ ನ್ಯೂಸ್ ರೀಡರ್ಸ್ ಗಳಲೆಲ್ಲ ಈ ಟಿವಿ ಗರಡಿಯಲ್ಲೇ ಪಳಗಿದವರು),
ಗಾನ ಕೋಗಿಲೆ ಎಸ್ ಪಿ ಬಾಲಸುಬ್ರಮಣ್ಯಂರವರನ್ನು ಕಿರುತೆರೆಗೆ ತಂದ, ವಿನಯ ಪ್ರಸಾದ್ ನಿರೂಪಿಸುತ್ತಿದ್ದ, ಅಂಚೆ ಮೂಲಕ ನಾವು ಕಳುಹಿಸುತ್ತಿದ್ದ ಹಾಡುಗಳನ್ನು ಹಾಡಿಸುತ್ತಾ, ನಮ್ಮ ನೆಲದ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದ "ಎದೆ ತುಂಬಿ ಹಾಡುವೆನು",
ಎಸ್ ಎಲ್ ಭೈರಪ್ಪನವ ಕಾದಂಬರಿ ಆಧಾರಿತ ಧಾರವಾಹಿ "ಗೃಹಭಂಗ",
(ಪ್ರತಿ ಶನಿವಾರ ಸಂಜೆ ಏಳು ಮೂವತಕ್ಕೆ ಪ್ರಸಾರವಾಗುತ್ತಿತ್ತು. ಕಾದಂಬರಿ ಓದುವಾಗ ಇದೆ ಧಾರಾವಾಹಿಯ ಪಾತ್ರಗಳೇ ಕಣ್ಮುಂದೆ ಬರುತ್ತಿದ್ದವು. http://www.youtube.com/watch?v=fDaNNPgQNzs; ಈ ಲಿಂಕ್ ನೋಡಿ, ನಿಮ್ಮ ನೆನಪು ಹಸಿರಾಗಬಹುದು),
ಟಿ ಎನ್ ಸೀತಾರಾಂ ರವರ ಭಾವನೆಗಳ ಬಣ್ಣದ ಚಿತ್ರಣ, ಕುತೂಹಲದ ಕೌತುಕವಾದ  "ಮನ್ವಂತರ","ಮುಕ್ತ","ಮುಕ್ತ-ಮುಕ್ತ" ಧಾರಾವಾಹಿಗಳು,
ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುತ್ತಿದ್ದ "ಪಾಪ ಪಾಂಡು","ಸಿಲ್ಲಿ ಲಲ್ಲಿ",
ಸಿನಿಮಾ ತಾರೆಯವರುಗಳ ಹಿನ್ನಲೆಯನ್ನು ತೋರಿಸುತ್ತಿದ್ದ "ಆಟೋಗ್ರಾಫ್ ಪ್ಲೀಸ್",
ಜಯಂತ್ ಕಾಯ್ಕಿಣಿ ನಿರೂಪಿಸುತ್ತಿದ್ದ "ರಸ ಋಷಿಗೆ ನಮಸ್ಕಾರ", "ವರಕವಿಗೆ ನಮನ","ಕಡಲ ತೀರ ಭಾರ್ಗವನಿಗೆ ನಮನ",
ಸಿ ಅಶ್ವಥ್ ನೇತೃತ್ವದ "ಕನ್ನಡವೇ ಸತ್ಯ",
ಪ್ರವೀಣ್ ಗೋಡ್ಖಿಂಡಿ ನೇತೃತ್ವದ "ರಾಗ ರಂಜನಿ",
"ಪಂಚ ತಂತ್ರ",
ರವಿ ಬೆಳೆಗೆರೆ ಮುಂದಾಳತ್ವದಲ್ಲಿ ಮೋದಿ ಬರುತ್ತಿದ್ದ "ಎಂದೂ ಮರೆಯದ ಹಾಡು",
ಇಂತಹ ಹತ್ತಾರು ಹಲವಾರು ಕಾರ್ಯಕ್ರಮಗಳ ಕಲಶದಂತಿದ್ದ ಈ ಟಿವಿ ವಾಟಿಕಾ "ವರ್ಷದ ಕನ್ನಡಿಗ"....

ಇಂತಹ ಸದಭಿರುಚಿಯ ಕಾರ್ಯಕ್ರಮಗಳನ್ನು ನಮಗೆ ನೀಡಿದ್ದ ನಮ್ಮ ಚಾನೆಲ್ ನಲ್ಲಿ ಇಂದು ಎಲ್ಲವೂ "ಬಿಗ್ ಬಾಸ್" ಮಾಯ.
F.D.I ಭಾರತಕ್ಕೆ ಬಂದರೆ ನಮ್ಮ ಚಿಲ್ಲರೆ ವ್ಯಾಪರಿಗಳಿಗಾಗುವ ಗತಿ ಬಿಗ್ ಬಾಸ್ ನಿಂದ ಉಳಿದ ಕಾರ್ಯಕ್ರಮಗಳಿಗಾಗಿದೆ.
ಬೆಳೆದಿರುವ ಸಂವಹನ (Communication) ಕ್ಷೇತ್ರದಲ್ಲಿ ಹೊಸ ಹೊಸ ಚಾನೆಲ್ ಗಳು ನೀಡುತ್ತಿರುವ ಪೈಪೋಟಿಗೆ ಸರಿಯಾದ ಉತ್ತರವೆನನ್ನೋ ಈ ಟಿವಿ ಬಿಗ್ ಬಾಸ್ ನಿಂದ ನೀಡಿದೆ. ಇದರಿಂದ ದೊರೆಯುತ್ತಿರುವುದು ಕೇವಲ ಮನೋರಂಜನೆ. ಒಳಗಿರುವ ಸ್ಪರ್ಧಿಗಳಿಗೆನೋ ತಮನ್ನು ತಾವು ಅರ್ಥ ಮಾಡಿಕೊಳ್ಳಲು, ತಿದ್ದಿ ನಡಿಯುವ ಉತ್ತಮ ಅವಕಾಶ. ನಮಗೆ ನಮ್ಮ ವ್ಯಕ್ತಿತ್ವದ ಅಭಿವೃದ್ದಿಗೆ ಆಗುವ ಪ್ರಯೋಜನ? ಶೂನ್ಯ !!!

ಮೇಲೆ ಹೇಳಿದ ಹಲವಾರು ಕಾರ್ಯಕ್ರಮಗಳಿಂದ ದೊರೆಯುತ್ತಿದ್ದ ಜ್ಞಾನ,ಸೂಕ್ಷ್ಮತೆ,ಸಾಹಿತ್ಯ ಕಲೆ,ಸಂಗೀತ,ಬೆಳೆಯುವ ಮಕ್ಕಳಿಗೆ ನೀಡುತ್ತಿದ್ದ ಅಭಿರುಚಿ,ಸಾಮಾಜಿಕ ಕಳಕಳಿ ಇವೆಲ್ಲವುಕ್ಕೂ ಪೂರ್ಣ ವಿರಾಮ ಬಿದ್ದಂತೆ ಆಗಲ್ಲಿಲ್ಲವೇ.

ಆಗ್ರಾ ರಾಷ್ಟ್ರೀಯ ವಾರ್ತೆಯನ್ನೇ ನಿಲ್ಲಿಸುವಂತಹ ಸ್ಥಿತಿ ಈ ಟಿವಿ ಗೆ ಏಕೆ ಬಂತು. ಲೇಖನದ ಮೊದಲ್ಲಲ್ಲಿ ಹೇಳಿದ Idelogical shift ಏನಾದರು ಚಾನೆಲ್ ನಲ್ಲಿ ಆಗುತ್ತಿದೆಯೇ?

"ಬದಲಾವಣೆ ಜಗದ ನಿಯಮ" ನಿಜ. ಆದರೆ ನಮ್ಮ ಬೇರನ್ನೇ ಅಲುಗಾಡಿಸಲು ನಾವು ಆ ಬದಲಾವಣೆಯ ಬಿರುಗಾಳಿಗೆ ಅವಕಾಶವನ್ನು ಕೊಡಬಾರದಲ್ಲವೇ ?

ನಾನೇನು ಬಿಗ್ ಬಾಸ್ ವಿರೋಧಿಯಲ್ಲ. ನಾನು ಬಿಗ್ ಬಾಸ್ ವೀಕ್ಷಕನೆ.
ಬೇರೆ ಚಾನೆಲ್ ಗಳ ಟಿ ಆರ್ ಪಿ ಇಳಿಸುವಂತಹ ಬಿಗ್-ಬಾಸ್ ಸಹ ಬರಲಿ; ಹಾಗೆಯೇ ಹಳೆಯ ಈ ಟಿವಿ ಮತ್ತೆ ನಮ್ಮ ಚಾನೆಲ್ ಆಗಲಿ.


Tuesday, June 18, 2013

ಮನಸ್ಸೆಂಬ ಜಿಜ್ಞಾಸೆ

ಪ್ರೀತಿಯ ಸ್ನೇಹಿತರೆ, ಮೊದಲು ಈ ಕೆಳಗಿನ ಹಾಡುಗಳನ್ನು ನೆನಪಿಸಿಕೊಳ್ಳಿ ...
ಮನಸ್ಸೇ ಬದುಕು ನಿನಗಾಗಿ, ಬವಣೆ ನಿನಗಾಗಿ(ಅಮೃತವರ್ಷಿಣಿ )...
ಮನಸ್ಸೇ ಓ ಮನಸ್ಸೇ ಎಂಥ ಮನಸ್ಸೇ(ಚಂದ್ರಮುಖಿ ಪ್ರಾಣಸಖಿ)...
ನಿನ್ನ ನನ್ನ ಮನವೂ ಸೇರಿತು ನನ್ನ ನಿನ್ನ ಹೃದಯ ಹಾಡಿತು(ಭಾಗ್ಯವಂತರು)...
ಮನಸ್ಸೇ ಮನಸ್ಸೇ ಥ್ಯಾಂಕ್ ಯು (ರಂಗ ಎಸ್ ಎಸ್ ಎಲ್ ಸಿ)...

ಈಗ ನನ್ನ ಒಂದು ಸರಳ ಬಾಲಿಶ ಪ್ರಶ್ನೆಗೆ ಉತ್ತರಿಸಿ ...
ಮನೆಯಲ್ಲಿನ ಪುಟ್ಟ ಮಕ್ಕಳು ಕಣ್ಣು ಯಾವುದು, ತಲೆ ಯಾವುದು, ಮೂಗು ಯಾವುದು ಎಂದೊಡನೆ ಹೇಗೆ ಸರಿಯಾಗಿ ದೇಹದ ಅಂಗಾಂಗಗಳನ್ನು ತೋರಿಸುತ್ತಾರೋ ಹಾಗೆ ನೀವು ನಿಮ್ಮ ಮನಸ್ಸು/ಮನ ಯಾವುದು ಎಂಬುದನ್ನು ಗುರುತು ಮಾಡಿಕೊಳ್ಳಿ .

ಮನಸ್ಸು ಎಂಬುದು ದೇಹದ ನಿರ್ದಿಷ್ಟ ಅಂಗವಾಗಿಲ್ಲದಿದ್ದರು, "ಇಂದೇಕೋ ಮನಸ್ಸಿಗೆ ಬೇಜಾರು", "ಇಂದು ಮನ ಸಂತೋಷಗೊಂಡಿದೆ" ಎನ್ನುವ ವಾಕ್ಯಗಳನ್ನು ಲೋಕಾಭಿರಾಮವಾಗಿ ಉಪಯೋಗಿಸುವ ನಾವುಗಳು ಸಾಮಾನ್ಯವಾಗಿ ಮನಸ್ಸು ಎಂದಾಕ್ಷಣ ನಮ್ಮ ಹೃದಯದ ಮೇಲೆ ಕೈ ಹಿಡುತ್ತೇವೆ ಅಲ್ಲವೇ ?

ಅದೊಂದು ಶುಕ್ರವಾರ; ಆಫೀಸಿನಲ್ಲಿ ಸ್ನೇಹಿತರ ಜೊತೆ ಊಟ ಮಾಡುವಾಗ "ಮನಸ್ಸಿನ" ವಿಚಾರ ಬಂತು.
ಎಲ್ಲರೂ ಹೃದಯವನ್ನೇ ತೋರಿಸುತ್ತಾರೆ ಎಂದುಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು.
 ಇದ್ದ ಗುಂಪಿನಲ್ಲಿ ಅರ್ಧ ಜನ ಹೃದಯವೆಂದು ಇನರ್ಧ ಜನ ಬುದ್ಧಿಯಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಿರು.
ತಮ್ಮ ನಿಲುವೇ ಗೆಲ್ಲಬೇಕೆಂಬ ಛಲದಲ್ಲಿ ವಾಗ್ಯುದ್ದಕ್ಕೆ ನಿಂತೆವು. ಚರ್ಚೆಯ ಕಾವು ಎಷ್ಟಿತ್ತು ಎಂದರೆ ನನ್ನ ಜಾಗಕ್ಕೆ ಹೋದ ತಕ್ಷಣ ಮಾಡಿದ ಕೆಲಸ ಗೂಗಲ್ ಸರ್ಚ್. ಅಲ್ಲೇ ನಿಜವಾದ ಕೌತುಕದ ವಿಷಯವಿದದ್ದು . ಹೌದು ಗೂಗಲ್ ಕನ್ನಡದ ಮನಸ್ಸು ಎಂಬ ಪದವನ್ನು ಆಂಗ್ಲ ಭಾಷೆಯ ಮೈಂಡ್ ಎಂಬ ಪದಕ್ಕೆ ತರ್ಜುಮೆಗೊಳಿಸುತ್ತದೆ.

ಪ್ರಾಯಶಃ ಚಲನಚಿತ್ರಗಳು,ಯುಗಳ ಗೀತೆಗಳು,ಕವಿಗಳ ಕವನಗಳ ಪ್ರಭಾವವಿರಬಹುದು. ಮನಸ್ಸು ಎಂದೊಡನೆ ನಾನಂತೂ ಹೃದಯವನ್ನೇ ತೋರಿಸುವುದು.
                                           

ಆದರೆ ನನ್ನ ಅರಿವಿಗೆ ಬಂದ ಮತ್ತೊಂದು ವಿಷಯವೆಂದರೆ ಮಾನಸಿಕ /ಮಾನಸಿಕ ರೋಗಿ ಎಂದಾಕ್ಷಣ ಬುದ್ದಿಯನ್ನೇ ತೋರಿಸುವ ನಾವು ಪ್ರೀತಿ ಸ್ನೇಹ ಆತ್ಮೀಯ ಭಾವನೆಗಳ ವಿಷಯಕ್ಕೆ ಮಾತ್ರ ಮನಸ್ಸನ್ನು ಹೃದಯಕ್ಕೆ ಹೊಲಿಸುತ್ತೇವೆ. ವಿಚಿತ್ರ ಆದರೆ ಸತ್ಯ.

ನನ್ನ ಸ್ನೇಹಿತೆ ಹೇಳಿದ ಒಂದು ವಿಶ್ಲೇಷಣೆ ಚೆನ್ನಾಗಿತ್ತು. ಮನಸ್ಸನ್ನು ಹೃದಯಕ್ಕೆ ತೋರಿಸುವವರು ಭಾವ ಜೀವಿಗಳು; ಬುದ್ಧಿ ಎನ್ನುವವರು ವ್ಯವಹಾರಿಕ ಮಂದಿ (Practical).
ಅದು ಅವಳ ವ್ಯಾಖ್ಯಾನ ...

ನೀವೇನಂತೀರಾ ಮನಸ್ಸು ಹೃದಯವೋ ಇಲ್ಲ ಬುದ್ದಿಯೋ !!!

ಈ ಚರ್ಚಾವಿಷಯ ಬಹಳ ಮುಂಚಿತವಾಗೆ ನಿಮ್ಮ ಹಾಗು ನಿಮ್ಮ ಸ್ನೇಹಿತರ ಹರಟೆಯಲ್ಲಿ ಬಂದಿರಬಹುದು.
ನನಗೆ ಎದುರಾಗಿದ್ದು ಇದೆ ಮೊದಲು.

ನಿಮ್ಮ ಅಭಿಪ್ರಾಯ,ಅನಿಸಿಕೆ,ಟೀಕೆ,ಟಿಪ್ಪಣಿಗಳಿಗೆ ಸ್ವಾಗತ ...



Saturday, May 11, 2013

ಬದುಕಿನ ಸೂಕ್ಷ್ಮ ಸಂಕೀರ್ಣ ಒಳನೋಟ - ವಂಶವೃಕ್ಷ ...


ಕಾದಂಬರಿ ಬಗೆಗಿನ ಲೇಖನದ ಮೊದಲು ...

ಎಸ್.ಎಲ್ .ಭೈರಪ್ಪ: "ಯಾವುದೇ ಕಾದಂಬರಿ ಮನುಷ್ಯನ ಸಂವೇದನಾಶೀಲತೆಯನ್ನು  ಹೆಚ್ಚಿಸಬೇಕು. ಅದು ಓದುಗನ ಆಂತರ್ಯವನ್ನು ಹೊಕ್ಕಿ, ಓದುವಾಗ ಅವನನ್ನು ಆವರಿಸುತ್ತದೆ. ಆದರೆ ಆ 'ಮಾಯೆ' ಕೇವಲ ತಾತ್ಕಾಲಿಕ. ಕಾದಂಬರಿ ಓದಿನಿಂದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಅಲ್ಪ ಸ್ವಲ್ಪ ಬದಲಾವಣೆಯಾದರೂ ಅದು ಕಾದಂಬರಿಯ ಸಾರ್ಥಕ್ಯ. ಯಾವುದೇ ಲೇಖನ / ಬರಹದಿಂದ ಇಡಿ ಸಮಾಜದ ಬದಲಾವಣೆ ಸಾಧ್ಯ ಎನ್ನುವುದು ಮಿಥ್ಯ."
ಇವು ಸುವರ್ಣ ನ್ಯೂಸ್ ನಲ್ಲಿ ಮೂಡಿಬಂದಿದ್ದ ಭೈರಪ್ಪನವರ ಸಂದರ್ಶನದ ಪ್ರಮುಖ ಸಾಲುಗಳು. ಈ ದೃಶ್ಯಾವಳಿ ಯು ಟ್ಯೂಬ್ ನಲ್ಲಿ ಲಭ್ಯವಿದೆ. ಕನ್ನಡ ಸಾಹಿತ್ಯಾಸಕ್ತರು ದಯವಿಟ್ಟು ವೀಕ್ಷಿಸಿ ...

1965 ರ ಕಾದಂಬರಿ. ಒಂದು ತಿಂಗಳ ಬರವಣಿಗೆ....  2013ರಲ್ಲೂ ಪ್ರಸ್ತುತ ...
ಈ ಕಾದಂಬರಿ ಚಿತ್ರವೂ ಆಗಿದೆ. ವಿನಂತಿ ಎಂದರೆ ದಯವಿಟ್ಟು ಚಿತ್ರವೀಕ್ಷಣೆ ಮಾಡದೆ ಕಾದಂಬರಿ ಓದಿ .
ಸಂಬಂಧಗಳು,ಕುಟುಂಬ ಇವುಗಳ ಅಡಿಪಾಯದ ಮೇಲೆ ನಿರ್ಮಾಣವಾಗಿರುವ ಭಾರತೀಯ ಸಮಾಜದ ನಮ್ಮ ಮನಸ್ಸುಗಳ ಗ್ರಹಿಕೆ,ಚಿಂತನಾ ಶ್ಯಕ್ತಿ,ವ್ಯಕ್ತಿತ್ವವನ್ನು ವಿಮರ್ಶಿಸುವ ತಿಳುವಳಿಕೆಗಳನ್ನು ಕಾದಂಬರಿ ಜಾಗೃತಗೊಳಿಸುತ್ತದೆ.ಯಾವುದೇ ಚಲನಚಿತ್ರವಾದರು, ಕಾದಂಬರಿಯಾಗಲಿ ಸಾಮಾನ್ಯವಾಗಿ ಒಂದಾದರು ಮನಸ್ಸಿಗೆ ಹಿಡಿಸದಂತಹ ಪಾತ್ರವಿರುತ್ತದೆ. ಆದರೆ ವಂಶವೃಕ್ಷದಲ್ಲಿ ನೀವೂ ಬೇಕೆಂದರೂ ಯಾವುದೇ ಪಾತ್ರವನ್ನು ನಿರ್ಲಕ್ಷಿಸಲು,ಕೀಳಾಗಿ ನೋಡಲು ಸಾಧ್ಯವಿಲ್ಲ. ಪ್ರತಿಯೊಂದು ಪಾತ್ರಕ್ಕೂ ಅದರ ನಡುವಳಿಕೆಗೂ ಓದುಗ ತನ್ನದೇ ಆದ ಅಭಿಪ್ರಾಯವನ್ನು ಬೆಳಸಿಕೊಂಡು,ಅದರ ಸರಿ-ತಪ್ಪುಗಳನ್ನು ವಿಮರ್ಶಿಸುವ ಮಟ್ಟಕ್ಕೆ ಓದುಗನನ್ನು ಒಯ್ಯುತ್ತದೆ. ಇದರಲ್ಲಿ ಕ್ರೌರ್ಯ/ಲೈಂಗಿಕತೆ/ಕಾಲ್ಪನಿಕತೆ ಯಾವುದೂ ವಿಜ್ರಂಭಿಸಿಲ್ಲ .

                                                     


ಚಾಮುಂಡಿ ಬೆಟ್ಟದಂತಹ ಸ್ಥಿರ ವ್ಯಕ್ತಿತ್ವದ ಮೇರು ಪಾತ್ರ ನಂಜನಗೂಡಿನ ಶ್ರೀನಿವಾಸ ಶೋತ್ರಿ...
ಧ್ಯೇಯ ಸಾಧನೆಯೇ ಜೀವನದ ಗುರಿ ಎಂದು ನಂಬಿ ಸಾಗುವ ಸದಾಶಿವರಾಯ...
ಸ್ತ್ರೀ ತುಮುಲಗಳನ್ನು ಕಣ್ಣು ಕಟ್ಟುವಂತೆಯು,ಕರಳು ಹಿಸುಕುವಂತೆಯೂ ಮೂಡಿರುವ ಕಾತ್ಯಾಯಿನಿ ...
ಈ ಮೂರು ಪಾತ್ರಗಳು ವಂಶವೃಕ್ಷದ ಬುಡ,ರೆಂಬೆ,ಕೊಂಬೆಗಳು ....

ಮನುಷ್ಯ ಜೀವನದ ಎಲ್ಲ ಭೌಗಿಕ ಸುಖಗಳನ್ನು ತ್ಯಜಿಸಿ, ಇತಿಹಾಸದ ಗ್ರಂಥ ರಚನೆಯೇ ತನ್ನ ಜೀವನದ ಆದ್ಯತೆಯೆಂದು ಮನಗಂಡು ಸಾಗುವ ರಾಯರು ತಮ್ಮ ಈ ಸಾಧನೆಗಾಗಿಯೇ ಕೈ ಹಿಡಿದ ಧರ್ಮಪತ್ನಿ,ಪುತ್ರರಿಂದ ದೂರವಾಗಿ ತಮ್ಮ ಆ ಪ್ರಯಾಣದ ಯಶಸ್ಸಿಗಾಗಿ ಮತೊಬ್ಬಳನ್ನು ಮದುವೆಯಾಗುತ್ತಾರೆ.
ಪತಿಯಿಂದ ದೂರವಿದ್ದರೂ ಅವರಿಗೆ ಕಷ್ಟ ಎಂದು ಗೊತ್ತಾದೊಡನೆ ಅವರ ಸೇವೆಗೆ ಧಾವಿಸುವ, ಓಂ ರಾಮ ನಾಮ ಬರೆಯುವ ನಾಗಲಕ್ಷ್ಮಿ ಭಾರತೀಯ ನಾರಿಯ ಹಿರಿಮೆಯ ಪ್ರತೀಕ ...
ಸದಾಶಿವರಾಯರ ಧ್ಯೇಯ ಸಾಧನೆಯಲ್ಲಿ ತನ್ನ ತೃಪ್ತಿ-ಆಸಕ್ತಿಗಳನ್ನು ಕಂಡುಕೊಂಡು ತನ್ನ ದೇಶ, ಜನಗಳನ್ನು ತ್ಯಜಿಸಿ ಬಂದು ಸಾಧಿಸುವ ಕರುಣಾರತ್ನೆ ಆಧುಕನಿಕತೆಯ ಪ್ರತೀಕ ...

ರಾಯರು,ನಾಗಲಕ್ಷ್ಮಿ,ಕರುಣಾ ತೆಗೆದುಕೊಳ್ಳುವ ಸಾಂಧರ್ಭಿಕ ನಿರ್ಧಾರಗಳು ಸರಿಯೋ ಇಲ್ಲ ತಪ್ಪೋ ಎನ್ನುವುದು ಓದುಗರ ವಿವೇಚನೆಗೆ ಬಿತ್ತಿದ್ದು...

ತನ್ನ ವೈವಾಹಿಕ ಜೀವನದ ಹೊಸ್ತಿಲಲ್ಲೇ ವೈಧವ್ಯದ ಸೋಂಕನ್ನು ಅನುಭವಿಸುವ ಕಾತ್ಯಾಯಿನಿ ಪ್ರೀತಿಯಿಂದ ಕಾಣುವ ಅತ್ತೆ ಮಾವಂದಿರನ್ನು ಗೌರವ ಪೂರ್ವಕವಾಗಿ ಕಾಣುವವಳಾದರು  ಪ್ರಕೃತಿ ಸಹಜ ಆಕರ್ಷಣೆಯ ಅವಸ್ಥೆಯಿಂದ ರಾಜರಾಯನ್ನು ವರಿಸುತ್ತಾಳೆ . ಪ್ರತಿ ಹೆಜ್ಜೆ ಇಡುವಾಗಲು ಕಾತ್ಯಾಯಿನಿಯ ಮನದ ರಣಾಂಗಣದಲ್ಲಿ ನಡೆವ ಯುದ್ದ, ತಳ-ಮಳಗಳ ಚಿತ್ರಣ ಅತ್ಯಂತ ಅಧ್ಬುತ. ಕಾದಂಬರಿಯ ಒಂದು ಹಂತದಲ್ಲಿ ತನ್ನ ಮಗನಿಂದಲೇ ತಿರಸ್ಕರಿಸಲ್ಪಡುತ್ತಾಳೆ ಎಂದು ಕಂಡುಬಂದರೂ ಅದು ಮಗ ಶ್ರೀನಿವಾಸನಿಗೆ ತಾಯಿಯ ಮೇಲಿದ್ದ ಅಸಮಾನದಿಂದಲ್ಲ ತಾತನ ಮೇಲಿದ್ದ ಅಭಿಮಾನದಿಂದಾಗಿ ಮಾತ್ರ. ಪಾಪ ಪುಣ್ಯಗಳ ತರ್ಕಕ್ಕೆ ಸಿಲುಕುವ ಕಾತ್ಯಯನಿಯ ಅಂತ್ಯ ಮಾತ್ರ ಹೃದಯ ವಿದ್ರಾವಕ .

ಮನುಷ್ಯ ಜೇವನದಲ್ಲಿ ಕೆಲವೊಮ್ಮೆ ಎದುರಾಗುವ ಕೆಲವು ವಿಲಕ್ಷಣ ಕ್ಷಣವನ್ನು ಎದುರಿಸಿ ಆ ಯುದ್ದದಲ್ಲಿ ವಿಜಯಿಯಾದರೆ ಸಿಗುವ ಗೌರವ ಹಿರಿತನಕ್ಕೆ ಸರಿಸಾಟಿಯಿರುವುದಿಲ್ಲ .  ಆಳವಾದ ಅಪಾರವಾದ ಧಾರ್ಮಿಕ ಜ್ಞಾನ, ವ್ಯಕ್ತಿತ್ವದ ಹೊನ್ನ ಕಲಶದಂತೆ ಇರುವ ತಾಳ್ಮೆ,ಧರ್ಮರಾಯನಿಗಿಂತ ಹೆಚ್ಚಾಗಿ ಧರ್ಮ ಪಾಲಿಸುವ ಮೇರು ಪಾತ್ರ ನಂಜನಗೂಡಿನ ಶ್ರೀನಿವಾಸ ಶೋತ್ರಿ . ತನ್ನದಲ್ಲದ್ದನ್ನು ಸಂಪೂರ್ಣವಾಗಿ ತ್ಯಜಿಸುವ ನಿರ್ಧಾರ,ವಿಧವೆ ಸೊಸೆ ಮತ್ತೊಬ್ಬರನ್ನು ಮದುವೆಯಾಗುತ್ತೇನೆ ಎನ್ನುವಾಗ, ತನ್ನ ವಂಶದ ಕುಡಿಯನ್ನು ಕರೆದುಕೊಂಡು ಹೋಗಲು ಬರುವ ಸೊಸೆಗೆ ಹೇಳುವ ಮಾತುಗಳು ವ್ಯಕ್ತಿತ್ವದ ಘನತೆಗೆ ಹಿಡಿದ ಕೈಗನ್ನಡಿ.

ಇಂತಹ ಅತ್ಯದ್ಬುತವಾದ ಕಥೆ-ಕಥಾ ಪಾತ್ರಗಳ ಸೃಷ್ಟಿಯ ಜೊತೆಯಲ್ಲಿ ಅನೇಕ ಪ್ರಮುಖವಾದ,ಸಂಶೋಧನೆಯಿಂದ ಮೂಡಿರುವ ಹಲವಾರು ಸಂಗತಿಗಳು ಕಾದಂಬರಿಯಲ್ಲಿವೆ. ಪ್ರಮುಖವಾಗಿ ನನಗೆ ಪ್ರಸ್ತಾಪಿಸಬೇಕೆಂದು ಅನಿಸಿದ್ದು ಈ ಕೆಳಗಿನವುಗಳು ...
1. ನಾಗರಿಕತೆ ಎನ್ನುವುದು ಒಂದು ಕಾಲದ ಜನರ ಮನಸ್ಸಿನಲ್ಲಿ ಆಳವಾಗಿ ನಿಂತಿರುವ ಮೌಲ್ಯಗಳನ್ನು ಅವಲಂಬಿಸಿರುತ್ತದೆ. ಕಲೆ,ಸಾಹಿತ್ಯ,ಧರ್ಮ,ಭೌತಿಕ ಪ್ರಗತಿ ಇವೆಲ್ಲವುಗಳು ಮೂಲಭೂತವಾಗಿ ಒಂದೇ ಮೌಲ್ಯದ ಆಧಾರದ ಮೇಲೆ ವಿಕಸಿತವಾದ ವಿವರಗಳು. ಮೂಲಭೂತವಾದ ಮೌಲ್ಯಗಳಲ್ಲಿ ಸ್ಪಷ್ಟವಾದ ಪರಿವರ್ತನೆಯಾದಾಗ ಹೊಸ ಯುಗ ಹೊಸ ಇತಿಹಾಸ ಪ್ರಾರಂಭವಾಗುತ್ತದೆ.
2. ಇತಿಹಾಸ ವಿಗತಿಯ ಕಡೆ ಸಾಗುತ್ತಿದೆ ಅಂದರೆ ಅದ್ಃ ಪತನದ ದಾರಿಯಲ್ಲಿ ಸಾಗುತ್ತಿದೆ. - ಹೆಚ್ಚುತ್ತಿರುವ ಪಾತಕಿ ಪೈಶಾಚಿಕ ಕೃತ್ಯಗಳನ್ನು ನೋಡಿದರೆ ಇದು ಸತ್ಯ ಎನ್ನುವುದರಲ್ಲಿ ಸಂದೇಹವಿಲ್ಲ.

ಇಂತಹ ಮಹಾನ್ ಕಾದಂಬರಿಗಳ ಕರ್ತೃವಿಗೆ,ಸಂಶೋಧಕನಿಗೆ ಇನ್ನು "ಜ್ಞಾನಪೀಠ" ಸಿಕ್ಕಿಲ್ಲ ಎನ್ನುವುದೇ ವಿಪರ್ಯಾಸ.
ಆದಷ್ಟು ಬೇಗ ಕನ್ನಡ ಸಾಹಿತ್ಯ ಕೀರಿಟಕ್ಕೆ ಒಂಬತ್ತನೇ ಮುಕುಟ ಮಣಿ ಸೇರಲಿ ಅದು ನಮ್ಮ ಎಸ್ ಎಲ್ ಬಿ ಅವರೇ ಆಗಿರಲಿ ಎನ್ನುವುದು ನನ್ನ ಮಹದಾಸೆ ...  



Saturday, March 23, 2013

ರಾಜಧರ್ಮ

                             
ಇತ್ತೀಚಿಗೆ ಸಾಮಾನ್ಯವಾಗಿ ಆಗಾಗ್ಗೆ ಒಂದು ವಾಕ್ಯ ಕಿವಿಗೆ ಬೀಳುತ್ತಿರುತ್ತದೆ... ಅದೇನೆಂದರೆ " ರಾಜಕೀಯವೇ ಹೊಲಸು " ಎನ್ನುವುದು...

ನೀವೂ ಸಹ ಈ ವಾಕ್ಯವನ್ನು ಅನುಮೋದಿಸುವುದಾದರೆ ನಿಮಗೆ ಕೆಲವು ಪ್ರಶ್ನೆಗಳಿವೆ...

೧. ನಮ್ಮ- ನಿಮ್ಮ ರಕ್ಷಣೆಯ ಕಾನೂನುಗಳನ್ನು ಮಾಡಿರುವವರು ಯಾರು? ಅದರ ಹೊಣೆ ಹೊತ್ತಿರುವವರು ಯಾರು?

೨. ನಿಮ್ಮ ಮನೆಗೆ ಪ್ರತಿನಿತ್ಯ ಹೇಗೆ ವಿದ್ಯುತ್,ನೀರು ಎಲ್ಲ ಹೇಗೆ ಸರಬರಾಜು ಆಗುತ್ತದೆ? 
   ಅಂತಹ ಸವಲತ್ತುಗಳಿಗೆ ಕಾನೂನು ರೂಪಿಸುವವರಾರು?

೩. ನೀವು ಓಡಾಡುವ ರಸ್ತೆ ಮಾಡಿಸಿದವರಾರು?

೪. ನೀವು ಉಡುವ ತೊಡುಗೆ,ತಿನ್ನುವ ಅನ್ನ ಎಲ್ಲದಕ್ಕೂ ಬೆಲೆ ನಿಗದಿಪಡಿಸಿದವರಾರು? 

೫. ನೀವು ಓದಲು ಯಾವುದೇ ವಿಷಯವನ್ನು ಆರಿಸಿಕೊಂಡರು,ಆ ವಿಷಯದಲ್ಲಿ ನೀವು ಕಲಿಯಬೇಕಾದ ಪಠ್ಯವನ್ನು ನಿರ್ಧರಿಸುವವರು ಯಾರು?

೬. ನಾವು ಮಾಡುವ ಕೆಲಸಗಳಲ್ಲಿ ಇದು ತಪ್ಪು ಇದು ಸರಿ ಎಂದು ನಿರ್ಧರಿಸುವ ಕಾನೂನು ಮಾಡುವವರಾರು ?

೭. ಇನ್ನು ಒಂದು ವಿಶೇಷ ಸಂಗತಿ ಹೇಳುತ್ತೇನೆ ... 
   ನೀವೇ ಕಷ್ಟ ಪಟ್ಟು ಸಂಪಾದಿಸುವ ಹಣದಲ್ಲಿ ಅಧಿಕಾರಯುತವಾಗಿ ಅದರ ಭಾಗವನ್ನು ತೆಗೆದುಕೊಳ್ಳುವವರಾರು ?

ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರ ಒಂದೇ ರಾಜಕೀಯ ಎನ್ನುವ ಕ್ಷೇತ್ರದ ಭಾಗವಾದ "ಸರ್ಕಾರ" .

ಒಂದು ದೇಶದ, ಒಂದು ಪ್ರದೇಶದ ನಾಗರೀಕರ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳ ಸವಲತ್ತುಗಳು, ಅವರ ರಕ್ಷಣೆ ,
ಸಮಾಜದ ಏಳಿಗೆ, ಅಲ್ಲಿನ ಭಾಷೆ,ಸಂಸ್ಕೃತಿ,ಆವಿಷ್ಕಾರ,ಪ್ರಾಕೃತಿಕ ವೈಪರೀತ್ಯ..
ಇಂತಹ ಹಲವಾರು ಸಂಗತಿಗಳ ಹೊಣೆಯ ನೊಗ ಹೊತ್ತು ಸಲಹುವ ರಾಜಧರ್ಮವೇ ರಾಜಕೀಯ .

ದಯವಿಟ್ಟು ಇನ್ನು ಮೇಲಾದರೂ "ರಾಜಕೀಯವೇ ಹೊಲಸು" ಎನ್ನುವ ಮಾತು "ರಾಜಕಾರಣಿಗಳೇ ಹೊಲಸು" ಎಂದು ವ್ಯಾಕರಣ ಶುದ್ದಿಯಾಗಲಿ..

ಹನ್ನಂದು ಜನರಾಡಿ ಕೋಟ್ಯಾಂತರ ಜನ ವೀಕ್ಷಿಸುವ ಕ್ರೀಡೆಗೆ, ಎರಡೂವರೆ ಗಂಟೆ ಮನೋರಂಜನೆ ಕೊಡುವ ಸಿನಿಮಾ ಕ್ಷೇತ್ರಕ್ಕೆ 
ಸಿಗುತ್ತಿರುವ ಗೌರವ ಮನ್ನಣೆ ಮಹತ್ತರವಾದ ರಾಜಕೀಯ ಕ್ಷೇತ್ರಕ್ಕೆ ಸಿಗುತ್ತಿಲ್ಲವಲ್ಲ ಎಂಬ ಖೇದ ಈ ಲೇಖನ ಬರೆಯಲು ಕಾರಣವಾಯ್ತು..
ಎಷ್ಟು ಜನ ಯುವಕರು ಯುವತಿಯರು ಇಲ್ಲಿ ನಡೆಯುವ ಸಂಗತಿಗಳನ್ನು ಚರ್ಚಿಸುತ್ತಾರೆ ,
ಈ ಕ್ಷೇತ್ರದೆಡೆಗೆ ಆಕರ್ಷಿತರಾಗುತ್ತಿದಾರೆ ನೀವೇ ಹೇಳಿ ?

ಇದಕ್ಕೆ ನಿಮ್ಮ ಉತ್ತರ ಏನೆಂಬುದು ನನಗೆ ಗೊತ್ತು.
ದಿನ ನಿತ್ಯದ ದೊಂಬರಾಟ ನೋಡಿ ಬೇಸತ್ತಿದೇವೆ ; ಕೋಟಿ ನೋಡಿಲ್ಲದ ನಾವು ಲಕ್ಷ ಕೋಟಿ ಹಗರಣ ನೋಡುವಂತಾಗಿದೆ, 
ಕಾನೂನು ರೂಪಿಸುವ ದೇವಾಲಯದಲ್ಲಿ ಅಂಗಿ ಹರಿದು ಮೇಜಿನ ಮೇಲೆ ಎದ್ದು ನಿಂತು ಕೂಗಾಡುವವರು, ಬ್ಲೂ ಫಿಲಂ ನೋಡುವವರು, 
ಸಂವಿಧಾನಿಕ ಉನ್ನತ ಹುದ್ದೆಯಲ್ಲಿದು ಸಮ್ಮಿಶ್ರ ಸರ್ಕಾರಗಳಲ್ಲಿ ಹಗರಣಗಳು ಸಾಮಾನ್ಯವೆನ್ನುವ ಹೊಣೆಗೇಡಿ ನಾಯಕರು ... 
ಇಂತವರಿರುವ ಕ್ಷೇತ್ರಕ್ಕೆ ಎಲ್ಲಿಂದ ಕೊಡಬೇಕು ಗೌರವ ಎನ್ನುವುದು ಅಲ್ಲವೇ ?


ಅಲ್ಲಾ  ಮ್ಯಾಚ್ ಫಿಕ್ಸಿಂಗ್ ಗಳು ಎಷ್ಟು ನಡೆದಿಲ್ಲ ... ಡ್ರಗ್ಸ್ ತೆಗೆದುಕೊಂಡು ಗೆದ್ದ ಪದಕವನ್ನು ಎಷ್ಟು ಜನ ಹಿಂತಿರುಗಿಸಿಲ್ಲ... 
ಇಂತಹ ಸಮಯದಲ್ಲೆಲ್ಲ ಕ್ರೀಡಾಪಟುವನ್ನು ಬೈಯುತ್ತೆವೆಯೇ ಹೊರತು ಇಡಿ ಕ್ರೀಡಾ ಕ್ಷೇತ್ರವನಲ್ಲವಲ್ಲ ... 
ಎಲ್ಲೋ ಒಂದಿಷ್ಟು ಕಾಮುಕ ಶಿಕ್ಷಕರಿದ್ದರೆ ಶಿಕ್ಷಣ ಕ್ಷೇತ್ರವನ್ನೇ ದೂರುತ್ತೆವೆಯೇ ?

ರಾಜಕೀಯದಲ್ಲಿ ಕೆಟ್ಟ ರಾಜಕಾರಣಿಗಳೇ ತುಂಬಿರಬಹುದು ಆದರೆ ಒಳ್ಳೆಯವರು ಇಲ್ಲವೇ ಇಲ್ಲ ಎಂಬ ಮಾತನ್ನು ಒಪ್ಪಲು ಸಾಧ್ಯವೆ ಇಲ್ಲ !!!

ಸರ್ಕಾರ ರಚಿಸಿ ಗದ್ದುಗೆಗಾಗಿ ನಡೆಯಬೇಕಾದ ನೈಪುಣ್ಯದ ತಂತ್ರಗಾರಿಗೆ ಐದು ವರ್ಷವೂ ಕುರ್ಚಿ ಉಳಿಸಿಕೊಳ್ಳುವುದರಲ್ಲಿಯೇ 
ಹೋಗುತ್ತಿದರೆ ಹೊಸ ಹೊಸ ಜನ ಹಿತ ಕಾರ್ಯಕ್ರಮಗಳು ನಿಯಮಗಳು ರೂಪಿಸಲು ಸಮಯವೆಲ್ಲಿರುತ್ತದೆ ?

ಇಷ್ಟೆಲ್ಲಾ ಕೆಟ್ಟದಕ್ಕೆ ಕಾರಣರಾದವರು ಕೇವಲ ರಾಜಕಾರಣಿಗಳೇ ? ಇದರಲ್ಲಿ ನಮ್ಮ ಹೊಣೆ ಏನೂ ಇಲ್ಲವೇ ...

ನಿಜ ಹೇಳಬೇಕೆಂದರೆ ನಾವೇ ಇದರ ರೂವಾರಿಗಳು ...

ಮೂರು ಪ್ರಮುಖ ಪ್ರಶ್ನೆಗಳು ...!!!

ನಮಲ್ಲಿ ಎಷ್ಟು ಜನ ಚುನಾವಣಾ ದಿನದಂದು ಮನೆಯಿಂದ ಹೊರ ಹೋಗಿ ಮತದಾನದ ನಮ್ಮ ಹಕ್ಕನ್ನು ಚಲಾಯಿಸುತ್ತೇವೆ ?

ಪಂಚ ವರ್ಷಗಳಿಗೊಮ್ಮೆ ಬರುವ ನಮ್ಮ ಹಕನ್ನು ಹಣ,ಹೆಂಡ,ಸೀರೆ,ಪಂಚೆಗಳಿಗೆ ಮಾರಿಕೊಳ್ಳುವವರು ಎಷ್ಟು ಜನ ...?

ಜಾತಿಯಿಂದ ಪಕ್ಷ, ಅಭ್ಯರ್ಥಿಗಳನ್ನು ಬೆಂಬಲಿಸುವವರು ಎಷ್ಟು ಜನ...?



ಆಗಾದರೆ ಇದಕೆಲ್ಲ ಪರಿಹಾರವೇ ಇಲ್ಲವೇ ?

ಪೃಥ್ವಿ ಚಲನಚಿತ್ರದಲ್ಲಿ ಒಂದು ಸಂಭಾಷಣೆ ಇದೆ... "ಬಡವರಿಗೆ ಎಥಿಕ್ಸ್  ಗಿಂತ ಹಸಿವು ಮುಖ್ಯ ಎನ್ನುವುದು ..." 

ಇಂತಹ ವರ್ಗಕ್ಕೆ, ಒಳ್ಳೆಯ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಸ್ವಯಂ ಪ್ರೇರಣೆಯಿಂದ advertisement 
ಕೊಡುವ ಸಾಮಾಜಿಕ ಜವಾಬ್ದಾರಿ ನಮ್ಮ media ಗಳಿಗೆ ಬರುವಂತಾಗಬೇಕು ... 
ಏಕೆಂದರೆ ಅದೊಂದೇ ಅವರನ್ನು ತಲುಪುವ ಸುಲಭ ಮಾರ್ಗ..
"ಕಳ್ಳರು ಕೊಡುವ ಹಣ ಕೊಳ್ಳೆ ಹೊಡೆಯಿರಿ ಆದರೆ ಮತದಾನ ಒಳ್ಳೆಯವರಿಗೆ ಮಾಡಿರಿ " ಎಂದು ತಿಳಿ ಹೇಳಬೇಕು ...



ಇನ್ನು so called literates..ನಾವುಗಳು ಪಕ್ಷವನ್ನು ನೋಡಿ ಮತವಾಕಬಾರದು. 
ವ್ಯಕ್ತಿಯನ್ನು ನೋಡಿ ಮತವಾಕಬೇಕು.. lets  ask  their complete background ... 
ಒಂದು ಕ್ರಿಮಿನಲ್ ಮೊಕೊದ್ದಮೆಯ ಸೋಂಕು ತಗುಲಿರದ ವ್ಯಕ್ತಿಯನ್ನು ನಾವು ನಮ್ಮ ನಾಯಕನನ್ನಾಗಿ ಆರಿಸಬೇಕು ... 
ಆತನ ಮೇಲೆ ಅಪರಾದದ ಆರೋಪ ಬಂದರು ಆತ ಅನರ್ಹ .. 
ಆತ ಓದಿದ್ದರು ಸರಿ ಓದದಿದ್ದರೂ ಸರಿ .. ನಮ್ಮ ಪ್ರಥಮ ಆದ್ಯತೆ ಕ್ಲೀನ್ ಪರ್ಸನ್ ...
ರಾಜಕಾರಣಿಗಳಿಗೆ ಬೇಕಿರುವುದು ಒಳ್ಳೆಯದನ್ನು ಮಾಡಬೇಕೆಂದಿರುವ ಮನ ...

ಇದರಿಂದ ಒಂದು ತೊಂದರೆ ಎದುರಾಗಬಹುದು ... ಅತಂತ್ರ ವಿಧಾನಸಭೆ ... hung  parliament ... 
ಪದೇ ಪದೇ  ಚುನಾವಣೆ ನಡೆಯುವುದರಿಂದ ಸರ್ಕಾರದ ರಾಜಸ್ವಕ್ಕೆ ಧಕ್ಕೆಯೂ ಆಗಬಹುದು. 
ಆದರೇ ಉತ್ತಮರನ್ನು ನಿಲ್ಲಿಸಬೇಕು... ಕೊಲೆಗಡುಕರು,ರೌಡಿಗಳು,ಕಾಮುಕರು,ಕಳ್ಳರು ಇವರುಗಳಿಗೆ ಮತ ಬೀಳುವುದಿಲ್ಲ 
ಎಂಬ ಸ್ಪಷ್ಟ ಸಂದೇಶ ರಾಜಕೀಯ ಪಕ್ಷಗಳಿಗೆ ಕೊಡಬಹುದು...
ಒಮ್ಮೆ ಉತ್ತಮ ವ್ಯಕ್ತಿಯನ್ನು ಆರಿಸಿ ಕಳುಹಿಸಿದ ನಂತರ ಆತನ ಕೆಲಸವನ್ನು ನೋಡಿ ಮುಂದೆ ಮತ್ತೊಮ್ಮೆ ಆತನನ್ನು 
ಗೆಲಿಸಬೇಕೋ ಬೇಡವೋ ಎಂದು ನಿರ್ಧರಿಸಬೇಕು.



ಒಂದು ಕ್ಷೇತ್ರದಲ್ಲಿ ಯಾರೂ ಉತ್ತಮ ಯೋಗ್ಯ ಅಭ್ಯರ್ಥಿ ಇಲ್ಲದಿದ್ದರೆ Lets go to voting booth and say 
"ಇಲ್ಲಿ ನನ್ನ ಕ್ಷೇತ್ರವನ್ನು ಪ್ರತಿನಿಧಿಸುವ ಯೋಗ್ಯತೆ ಯಾರಿಗೂ ಇಲ್ಲ ...ಅದಕ್ಕಾಗಿ  ನಾನು ಯಾರಿಗೂ ಮತದಾನ ಮಾಡುವುದಿಲ್ಲ ಎಂದು".
ಇಂತ ಸಂದರ್ಭದಲ್ಲಿ your vote is registered...

ಇದಕಿಂತ ಮುಖ್ಯವಾಗಿ ಸಮಾಜ ಶಾಸ್ತ್ರ ಬೋಧಿಸುವ ಶಿಕ್ಷಕರು,ಮಕ್ಕಳಿಗೆ ಚುನಾವಣೆ,ಮತದಾನ,ಸರ್ಕಾರ ಇವುಗಳ ಮಹತ್ವವನ್ನು ಹೇಳಬೇಕು..
ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಪ್ರೌಡಶಾಲೆಯಲ್ಲೇ ತಿಳಿ ಹೇಳಿದರೆ ದುಡ್ಡು ತೆಗೆದುಕೊಳ್ಳದೆ, ಜಾತಿ ನೋಡದೇ 
ಉತ್ತಮ ಅಭ್ಯಥಿಗಳನ್ನು ಆರಿಸುವಂತಹ ಮತದಾರ ಹುಟ್ಟುವುದು ...

೨೦೧೩ ರ ಮೇ ತಿಂಗಳು ಬರುತ್ತಿದೆ ... ೨೦೧೪ ಬರುತ್ತದೆ ... ತಪ್ಪದೇ  ನಾವುಗಳು ನಮ್ಮ ಹಕ್ಕನ್ನು ಚಲಾಯಿಸೋಣ ...

and  ha ಪ್ಲೀಸ್ ಡೋಂಟ್ forget  ರಾಜಕೀಯ ಹೊಲಸಲ್ಲ .. ರಾಜಕಾರಣಿಗಳು ....  




Sunday, January 27, 2013

ಕನಸುಗಳ ಬೆನ್ನತಿ ಹೊರಟವರು ....

ಈ ಲೇಖನವನ್ನು ಎರಡು ರೀತಿಯಾಗಿ ಬರೆಯಬಹುದೆಂದು ಯೋಚನೆ ಬಂತು. ಒಂದು ನನ್ನ ಬಗ್ಗೆಯೇ ಬರೆಯುತ್ತಾ ಹೋಗುವುದು; ನನ್ನದೇ ಬ್ಲಾಗ್ ತಪ್ಪೇನಿಲ್ಲ ಅನ್ನಿ ;) ಆದರೆ ಅದು ನನ್ನ ಆತ್ಮಕಥನವಾಗಿಬಿಡುತ್ತದೆ. ಅದು ಹಾಗೆ ಆಗದೇ ಊರು ಬಿಟ್ಟು ಬೇರೆಡೆ ಓದುವ , ಬೇರೆಡೆ ದುಡಿಯುವ ಹಳ್ಳಿಗರ ಕಥೆ-ವ್ಯಥೆ ಆಗಬೇಕೆಂಬ ಆಶಯದಿಂದ ಎರಡನೇ ರೀತಿ ಆಯ್ದುಕೊಂಡೆ. ತುಂಬ ವಿಸ್ತಾರವಾದ ವಿಷಯವಾದರೂ ಚೊಕ್ಕದಾಗಿ ಬರೆಯಬೇಕೆನ್ನುವ ಆಸೆ, ನೋಡೋಣ ಏನಾಗುವುದೋ ಎಂದು.

ಎಲ್ಲೋ ಹುಟ್ಟಿ, ಯಾವುದೋ ಪ್ರದೇಶದಲ್ಲಿ ಬೆಳೆದು,ಮತ್ಯಾವುದೋ ಪ್ರದೇಶದಲ್ಲಿ ವಾಸಿಸುವುದು ಈ ಔದ್ಯೊಗಿಕ, ಜಾಗತಿಕ ಯುಗದಲ್ಲಿ ಪ್ರತಿಯೊಬ್ಬ ಹಳ್ಳಿಗನು ಎದುರಿಸಲೇಬೇಕಾದ ಕಟು ಸತ್ಯ.
ಮಾಲಿನ್ಯವಿಲ್ಲದ,ಸುಂದರ ಪರಿಸರದ,ಗುಡ್ಡ ಬೆಟ್ಟ ಕೆರೆ ತೊರೆ,ಹೊಲ ಗದ್ದೆ,ಪ್ರಾಣಿ ಪಕ್ಷಿ,ಜಾನಪದ ಸೊಗಡಿನ ಜಾತ್ರೆ ಉತ್ಸವ ಇಂತಹ ಹತ್ತಾರು ಹಲವಾರು ವಿಶೇಷತೆಗಳು ತುಂಬಿರುವ ಸಣ್ಣ ಹಳ್ಳಿಗಳಲ್ಲಿ ಜನಿಸಿರುತ್ತೇವೆ.
ತಂದೆ ತಾಯಿ, ಬಂಧು ಬಳಗ ಇವರುಗಳ ಪ್ರೀತಿಯ ಪಲ್ಲಕ್ಕಿಯಲ್ಲಿ ಮೆರೆಯುತ್ತಿರುತ್ತೇವೆ. ಅಲ್ಲಿನ ಆಟಗಳೇ ಬೇರೆ, ಪಾಠದ ರೀತಿಯೇ ಬೇರೆ ಅಲ್ಲಿ ಕನ್ನಡ ಮಾಧ್ಯಮವಾಗಲಿ ಆಂಗ್ಲ ಮಾಧ್ಯಮವಾಗಲಿ ಎಲ್ಲ ಒಂದೇ ...
ಚೆನ್ನಾಗಿ ಓದುತಿದ್ದರೆ, ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದರೆ ಪ್ರತಿಯೊಬ್ಬರ ಮನೆಯಲ್ಲೂ ನಮ್ಮ ಹೆಸರು, ನಾವು ಯಾರೆಂಬುದು ಗೊತ್ತಿರುತ್ತದೆ.
ಅಲ್ಲಿ ನಾವು ಎದುರಿಸಬೇಕಾದ ಸ್ಪರ್ಧಾ ಜಗತ್ತಿಗೆ ಮಿತಿ ಇರುತ್ತದೆ. ಆದರೆ ಇಲ್ಲಿ ಸಿಗುವ ಅನುಭವ ಅನನ್ಯ. ಇಲ್ಲಿ ಕಲಿಯುವ ಸಣ್ಣ ಪುಟ್ಟ ಸಂಗತಿಗಳು ನಮ್ಮ ಜೀವನಕ್ಕೆ ಆಧಾರ. ಉನ್ನತ ವ್ಯಾಸಂಗ ಮದಬೇಕೆನ್ನುವವರು ಇಂತಹ ಹಳ್ಳಿಯನ್ನು ಬಿಟ್ಟು ಒಂದಲ್ಲಾ ಒಂದು ದಿನ ಪಟ್ಟಣದೆಡೆಗೆ ಹೆಜ್ಜೆ ಹಾಕಲೇಬೇಕಾಗುತ್ತದೆ.

                  
ಹೊಸ ಜನ,ಹೊಸ ಸ್ಥಳ,ಹೊಸ ಪರಿಚಯಗಳು,ಹೊಸ ಅನುಭವಗಳು,ಹೊಸ ಸವಾಲುಗಳು ...
ಹೀಗೆ ಈ ಹೊಸ ಪ್ರಪಂಚ ಕಾಯಿ ಹಣ್ಣಾಗುವಂತೆ , ವ್ಯಕ್ತಿತ್ವ ವಿಕಸಿಸುವ ಸುವರ್ಣಾವಕಾಶವನ್ನು ನಮಗೊದಗಿಸುತ್ತದೆ.
"ಒಳ್ಳೆಯದು-ಕೆಟ್ಟದು" ಒಂದೇ ನಾಣ್ಯದ ಎರಡು ಮುಖಗಳಿದಂತೆ. ನಾವು ಬರುವ ಹೊಸ ಜಾಗದಲ್ಲಿ ಎಲ್ಲ ಒಳ್ಳೆಯದೇ ಇರುತ್ತದೆ ಎಂದೇನಲ್ಲ... ನಮ್ಮ ಗುರಿ ನಮ್ಮ ಧ್ಯೇಯಗಳನ್ನು ಮನದಲ್ಲಿಟುಕೊಂಡು ಹಂಸ ಹೇಗೆ ನೀರಿರುವ ಹಾಲಿನಲ್ಲಿ ಕೇವಲ ಹಾಲನ್ನು ಹೀರುವುದೋ ಹಾಗೆಯೇ ಉತ್ತಮ ಸಂಗತಿಗಳೊಂದಿಗೆ ಬೆಳೆಯಬೇಕು..
ವಿದ್ಯಾರ್ಥಿ ನಿಲಯಗಳಲ್ಲಿ ನೆಲೆಸುವ ಅನುಭವ ನಿಜವಾಗಿಯೂ ಅಪರೂಪ ಅನನ್ಯ.. ವಿವಿಧ ಪ್ರದೇಶದ ಜನರು,ಹಲವು ಬಗೆಯ ಭಾಷೆ,ವಿಧ ವಿಧವಾದ ಹವ್ಯಾಸ,ಹಲವು ಗುರಿ,  ಅನೇಕ ರೀತಿಯ ವ್ಯಕ್ತಿತ್ವ...ಎಲ್ಲರಲ್ಲಿ ಬೆರೆತು, ಎಲ್ಲರೊಳಗೊಂದಾಗುವ ಸ್ಥಳ ಹಾಸ್ಟೆಲ್... ಕೂಡಿ ಬಾಳುವ, ಹಂಚಿ ತಿನ್ನುವ,ಸುಖದಲ್ಲಿ ಸಂಭ್ರಮಿಸುವ,ದುಃಖದಲ್ಲಿ ಭಾಗಿಯಾಗುವ,ಒಬ್ಬರು ಮತ್ತೊಬ್ಬರನ್ನು ಸುಶೃಸಿ ಹಾರೈಕೆ ಮಾಡುವ .. ಒಟ್ಟಿನಲ್ಲಿ ಬದುಕಿನಲ್ಲಿ ಪರಿಪೂರ್ಣ ವ್ಯಕ್ತಿಯಾಗುವ ಗುಣಗಳನ್ನು ಕಲಿಸುತ್ತದೆ ಹಾಸ್ಟೆಲ್..

ನಗರ ಸೌಲಭ್ಯಗಳನ್ನು ಸವಿಯುತ್ತಾ,ತಂತ್ರಜ್ಞಾನವನ್ನು ರುಚಿಸುತ್ತಾ,ನವ್ಯ ಜೀವನ ಶೈಲಿಯನ್ನು ರೂಢಿಸಿಕೊಳುತ್ತ "ಹಳೆ ಬೇರು" ಹೊಸ ಚಿಗುರಿನ ಹೆಮ್ಮರವಾಗುತ್ತದೆ...
ಏನೇ ಆದರೂ ಹಳ್ಳಿಗೆ ಹೋದಾಗ ಹಳ್ಳಿಯವನಾಗಿರದೆ,ಪಟ್ಟಣದ ಅಹಂಕಾರಗಳನ್ನು ತೋರಿಸಿದರೆ ನಮ್ಮ ಗೌರವಕ್ಕೆ ಚುತಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ..

ನಾವಾಗಿಯೇ ಅಲ್ಲದಿದ್ದರೂ, ಕಾಲ ಚಕ್ರದಲ್ಲಿ ಮನೆಯಿಂದ ದೂರವಿರುತ್ತೇವೆ. ನಾವು ನಮ್ಮ ಸುಖ, ನಮ್ಮ ಸ್ನೇಹಿತರು, ನಮ್ಮ ಖುಷಿ ಇವುಗಳ ಮಧ್ಯೆ ಎಲ್ಲೋ ಕೆಲವೊಮ್ಮೆ ನಮ್ಮ ಪೋಷಕರಿಂದ ದೂರವಾಗುತ್ತಿದ್ದೇವೇನೋ,ಅವರ ಮೇಲಿನ ನಮ್ಮ ಬಂಧ ಪ್ರೀತಿಗಳು ಕಡಿಮೆಯಾಗುತಿದೆಯೋ ಎಂಬ ಭ್ರಮೆ ನಂನಂತು ಕಾಡಿದೆ ..
ಈ ಭ್ರಮೆ ಕಾಡದೇ "ದೂರವಿದ್ದವರ ಮೇಲೆಯೇ ಪ್ರೀತಿ ಜಾಸ್ತಿ" ಎಂಬ ಮಾತಿನಂತೆ ನಮನ್ನು ಹೆತ್ತವರ ಮೇಲೆ ನಮ್ಮ ಪ್ರೀತಿ ನಮ್ಮ ಗೌರವ ಹೆಚ್ಚಲಿ ಎಂಬ ಆಶಯ ...


 

Saturday, January 26, 2013

ಸದಾ ಕಾಡುವ ಅನುಪಸ್ಥಿತಿ .....

 
 
ಏಕೋ ಏನೋ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ,
ಇಲ್ಲದ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಊರಿಂದ ನಾ ಬಂದು, ಬಾಗಿಲಲಿ ನಿಂತಾಗ,
ಕೈ ಚೀಲ ಕಸಿದು, ಉಡುಗೊರೆಯ ಹುಡುಕಲು,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ಅಮ್ಮ ಕೊಡುವ ತಿಂಡಿಯ ಸಮಪಾಲು ಕೇಳಲು,
ಟಿ.ವಿ ರಿಮೋಟಿಗೆ ಕಚ್ಚಾಡಲು,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ತನ್ನ ಸಹೋದರಿಯ ಹುಟ್ಟು ಹಬ್ಬಕ್ಕೆ
ಉಡುಗೊರೆ ಕೊಳ್ಳುವ ಸ್ನೇಹಿತನ ಜೊತೆ ಹೋದಾಗ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ನನ್ನ ತಂಗಿ ನನ್ನಂತೆಯೇ ಜಾಣೆ,
ನನ್ನನ್ನೇ ಮೀರಿಸಿ ಗುರಿಯೊಂದನ್ನು ಸಾಧಿಸಿದ್ದಾಳೆ
ಎಂದು ಬೀಗುವ ಸ್ನೇಹಿತನ ಹೆಮ್ಮೆಯ ಮಾತನ್ನು ಕೇಳಿದಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಶ್ರಾವಣ ಮಾಸದ ಪೌರ್ಣಮಿದಿನದಂದು,
ರಾಖಿ ಕಟ್ಟುವ ಸಹೋದರಿಯರ ಕಂಡಾಗ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ಸೀರೆ ಧರಿಸಿ, ದೀಪಾವಳಿಯಲ್ಲಿ ಮನೆ ಬೆಳಗಿಸುವ,
ಸಂಕ್ರಾಂತಿಯಲಿ ಎಳ್ಳು-ಬೆಲ್ಲ ಬೀರುವ ಗೆಳತಿಯರ ಕಂಡಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಸಹೋದರನ ಸುಖದಲ್ಲಿ ಸಂಭ್ರಮಿಸುವ,
ದುಃಖದಲಿ ಸಂತೈಸುವ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ತಂಗಿಯ ವಿವಾಹದ ನಂತರವೇ ನನ್ನದು !!!
ಎನ್ನುವ ಗೆಳಯರ ಜವಾಬ್ದಾರಿಯ ಕುರುಹನ್ನು ಕಂಡಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಏಕೋ ಏನೋ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ,
ಅಮ್ಮನ ಬಳಿ ನನಗೊಬ್ಬಳು ತಂಗಿ ಇರಬೇಕಿತ್ತು ಎಂದು ಪೇಚಾಡುವಾಗ,
ಇಲ್ಲದ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...