ಕಾದಂಬರಿ ಬಗೆಗಿನ ಲೇಖನದ ಮೊದಲು ...
ಎಸ್.ಎಲ್ .ಭೈರಪ್ಪ: "ಯಾವುದೇ ಕಾದಂಬರಿ ಮನುಷ್ಯನ ಸಂವೇದನಾಶೀಲತೆಯನ್ನು ಹೆಚ್ಚಿಸಬೇಕು. ಅದು ಓದುಗನ ಆಂತರ್ಯವನ್ನು ಹೊಕ್ಕಿ, ಓದುವಾಗ ಅವನನ್ನು ಆವರಿಸುತ್ತದೆ. ಆದರೆ ಆ 'ಮಾಯೆ' ಕೇವಲ ತಾತ್ಕಾಲಿಕ. ಕಾದಂಬರಿ ಓದಿನಿಂದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಅಲ್ಪ ಸ್ವಲ್ಪ ಬದಲಾವಣೆಯಾದರೂ ಅದು ಕಾದಂಬರಿಯ ಸಾರ್ಥಕ್ಯ. ಯಾವುದೇ ಲೇಖನ / ಬರಹದಿಂದ ಇಡಿ ಸಮಾಜದ ಬದಲಾವಣೆ ಸಾಧ್ಯ ಎನ್ನುವುದು ಮಿಥ್ಯ."
ಇವು ಸುವರ್ಣ ನ್ಯೂಸ್ ನಲ್ಲಿ ಮೂಡಿಬಂದಿದ್ದ ಭೈರಪ್ಪನವರ ಸಂದರ್ಶನದ ಪ್ರಮುಖ ಸಾಲುಗಳು. ಈ ದೃಶ್ಯಾವಳಿ ಯು ಟ್ಯೂಬ್ ನಲ್ಲಿ ಲಭ್ಯವಿದೆ. ಕನ್ನಡ ಸಾಹಿತ್ಯಾಸಕ್ತರು ದಯವಿಟ್ಟು ವೀಕ್ಷಿಸಿ ...
1965 ರ ಕಾದಂಬರಿ. ಒಂದು ತಿಂಗಳ ಬರವಣಿಗೆ.... 2013ರಲ್ಲೂ ಪ್ರಸ್ತುತ ...
ಈ ಕಾದಂಬರಿ ಚಿತ್ರವೂ ಆಗಿದೆ. ವಿನಂತಿ ಎಂದರೆ ದಯವಿಟ್ಟು ಚಿತ್ರವೀಕ್ಷಣೆ ಮಾಡದೆ ಕಾದಂಬರಿ ಓದಿ .
ಸಂಬಂಧಗಳು,ಕುಟುಂಬ ಇವುಗಳ ಅಡಿಪಾಯದ ಮೇಲೆ ನಿರ್ಮಾಣವಾಗಿರುವ ಭಾರತೀಯ ಸಮಾಜದ ನಮ್ಮ ಮನಸ್ಸುಗಳ ಗ್ರಹಿಕೆ,ಚಿಂತನಾ ಶ್ಯಕ್ತಿ,ವ್ಯಕ್ತಿತ್ವವನ್ನು ವಿಮರ್ಶಿಸುವ ತಿಳುವಳಿಕೆಗಳನ್ನು ಕಾದಂಬರಿ ಜಾಗೃತಗೊಳಿಸುತ್ತದೆ.ಯಾವುದೇ ಚಲನಚಿತ್ರವಾದರು, ಕಾದಂಬರಿಯಾಗಲಿ ಸಾಮಾನ್ಯವಾಗಿ ಒಂದಾದರು ಮನಸ್ಸಿಗೆ ಹಿಡಿಸದಂತಹ ಪಾತ್ರವಿರುತ್ತದೆ. ಆದರೆ ವಂಶವೃಕ್ಷದಲ್ಲಿ ನೀವೂ ಬೇಕೆಂದರೂ ಯಾವುದೇ ಪಾತ್ರವನ್ನು ನಿರ್ಲಕ್ಷಿಸಲು,ಕೀಳಾಗಿ ನೋಡಲು ಸಾಧ್ಯವಿಲ್ಲ. ಪ್ರತಿಯೊಂದು ಪಾತ್ರಕ್ಕೂ ಅದರ ನಡುವಳಿಕೆಗೂ ಓದುಗ ತನ್ನದೇ ಆದ ಅಭಿಪ್ರಾಯವನ್ನು ಬೆಳಸಿಕೊಂಡು,ಅದರ ಸರಿ-ತಪ್ಪುಗಳನ್ನು ವಿಮರ್ಶಿಸುವ ಮಟ್ಟಕ್ಕೆ ಓದುಗನನ್ನು ಒಯ್ಯುತ್ತದೆ. ಇದರಲ್ಲಿ ಕ್ರೌರ್ಯ/ಲೈಂಗಿಕತೆ/ಕಾಲ್ಪನಿಕತೆ ಯಾವುದೂ ವಿಜ್ರಂಭಿಸಿಲ್ಲ .
ಚಾಮುಂಡಿ ಬೆಟ್ಟದಂತಹ ಸ್ಥಿರ ವ್ಯಕ್ತಿತ್ವದ ಮೇರು ಪಾತ್ರ ನಂಜನಗೂಡಿನ ಶ್ರೀನಿವಾಸ ಶೋತ್ರಿ...
ಧ್ಯೇಯ ಸಾಧನೆಯೇ ಜೀವನದ ಗುರಿ ಎಂದು ನಂಬಿ ಸಾಗುವ ಸದಾಶಿವರಾಯ...
ಸ್ತ್ರೀ ತುಮುಲಗಳನ್ನು ಕಣ್ಣು ಕಟ್ಟುವಂತೆಯು,ಕರಳು ಹಿಸುಕುವಂತೆಯೂ ಮೂಡಿರುವ ಕಾತ್ಯಾಯಿನಿ ...
ಈ ಮೂರು ಪಾತ್ರಗಳು ವಂಶವೃಕ್ಷದ ಬುಡ,ರೆಂಬೆ,ಕೊಂಬೆಗಳು ....
ಮನುಷ್ಯ ಜೀವನದ ಎಲ್ಲ ಭೌಗಿಕ ಸುಖಗಳನ್ನು ತ್ಯಜಿಸಿ, ಇತಿಹಾಸದ ಗ್ರಂಥ ರಚನೆಯೇ ತನ್ನ ಜೀವನದ ಆದ್ಯತೆಯೆಂದು ಮನಗಂಡು ಸಾಗುವ ರಾಯರು ತಮ್ಮ ಈ ಸಾಧನೆಗಾಗಿಯೇ ಕೈ ಹಿಡಿದ ಧರ್ಮಪತ್ನಿ,ಪುತ್ರರಿಂದ ದೂರವಾಗಿ ತಮ್ಮ ಆ ಪ್ರಯಾಣದ ಯಶಸ್ಸಿಗಾಗಿ ಮತೊಬ್ಬಳನ್ನು ಮದುವೆಯಾಗುತ್ತಾರೆ.
ಪತಿಯಿಂದ ದೂರವಿದ್ದರೂ ಅವರಿಗೆ ಕಷ್ಟ ಎಂದು ಗೊತ್ತಾದೊಡನೆ ಅವರ ಸೇವೆಗೆ ಧಾವಿಸುವ, ಓಂ ರಾಮ ನಾಮ ಬರೆಯುವ ನಾಗಲಕ್ಷ್ಮಿ ಭಾರತೀಯ ನಾರಿಯ ಹಿರಿಮೆಯ ಪ್ರತೀಕ ...
ಸದಾಶಿವರಾಯರ ಧ್ಯೇಯ ಸಾಧನೆಯಲ್ಲಿ ತನ್ನ ತೃಪ್ತಿ-ಆಸಕ್ತಿಗಳನ್ನು ಕಂಡುಕೊಂಡು ತನ್ನ ದೇಶ, ಜನಗಳನ್ನು ತ್ಯಜಿಸಿ ಬಂದು ಸಾಧಿಸುವ ಕರುಣಾರತ್ನೆ ಆಧುಕನಿಕತೆಯ ಪ್ರತೀಕ ...
ರಾಯರು,ನಾಗಲಕ್ಷ್ಮಿ,ಕರುಣಾ ತೆಗೆದುಕೊಳ್ಳುವ ಸಾಂಧರ್ಭಿಕ ನಿರ್ಧಾರಗಳು ಸರಿಯೋ ಇಲ್ಲ ತಪ್ಪೋ ಎನ್ನುವುದು ಓದುಗರ ವಿವೇಚನೆಗೆ ಬಿತ್ತಿದ್ದು...
ತನ್ನ ವೈವಾಹಿಕ ಜೀವನದ ಹೊಸ್ತಿಲಲ್ಲೇ ವೈಧವ್ಯದ ಸೋಂಕನ್ನು ಅನುಭವಿಸುವ ಕಾತ್ಯಾಯಿನಿ ಪ್ರೀತಿಯಿಂದ ಕಾಣುವ ಅತ್ತೆ ಮಾವಂದಿರನ್ನು ಗೌರವ ಪೂರ್ವಕವಾಗಿ ಕಾಣುವವಳಾದರು ಪ್ರಕೃತಿ ಸಹಜ ಆಕರ್ಷಣೆಯ ಅವಸ್ಥೆಯಿಂದ ರಾಜರಾಯನ್ನು ವರಿಸುತ್ತಾಳೆ . ಪ್ರತಿ ಹೆಜ್ಜೆ ಇಡುವಾಗಲು ಕಾತ್ಯಾಯಿನಿಯ ಮನದ ರಣಾಂಗಣದಲ್ಲಿ ನಡೆವ ಯುದ್ದ, ತಳ-ಮಳಗಳ ಚಿತ್ರಣ ಅತ್ಯಂತ ಅಧ್ಬುತ. ಕಾದಂಬರಿಯ ಒಂದು ಹಂತದಲ್ಲಿ ತನ್ನ ಮಗನಿಂದಲೇ ತಿರಸ್ಕರಿಸಲ್ಪಡುತ್ತಾಳೆ ಎಂದು ಕಂಡುಬಂದರೂ ಅದು ಮಗ ಶ್ರೀನಿವಾಸನಿಗೆ ತಾಯಿಯ ಮೇಲಿದ್ದ ಅಸಮಾನದಿಂದಲ್ಲ ತಾತನ ಮೇಲಿದ್ದ ಅಭಿಮಾನದಿಂದಾಗಿ ಮಾತ್ರ. ಪಾಪ ಪುಣ್ಯಗಳ ತರ್ಕಕ್ಕೆ ಸಿಲುಕುವ ಕಾತ್ಯಯನಿಯ ಅಂತ್ಯ ಮಾತ್ರ ಹೃದಯ ವಿದ್ರಾವಕ .
ಮನುಷ್ಯ ಜೇವನದಲ್ಲಿ ಕೆಲವೊಮ್ಮೆ ಎದುರಾಗುವ ಕೆಲವು ವಿಲಕ್ಷಣ ಕ್ಷಣವನ್ನು ಎದುರಿಸಿ ಆ ಯುದ್ದದಲ್ಲಿ ವಿಜಯಿಯಾದರೆ ಸಿಗುವ ಗೌರವ ಹಿರಿತನಕ್ಕೆ ಸರಿಸಾಟಿಯಿರುವುದಿಲ್ಲ . ಆಳವಾದ ಅಪಾರವಾದ ಧಾರ್ಮಿಕ ಜ್ಞಾನ, ವ್ಯಕ್ತಿತ್ವದ ಹೊನ್ನ ಕಲಶದಂತೆ ಇರುವ ತಾಳ್ಮೆ,ಧರ್ಮರಾಯನಿಗಿಂತ ಹೆಚ್ಚಾಗಿ ಧರ್ಮ ಪಾಲಿಸುವ ಮೇರು ಪಾತ್ರ ನಂಜನಗೂಡಿನ ಶ್ರೀನಿವಾಸ ಶೋತ್ರಿ . ತನ್ನದಲ್ಲದ್ದನ್ನು ಸಂಪೂರ್ಣವಾಗಿ ತ್ಯಜಿಸುವ ನಿರ್ಧಾರ,ವಿಧವೆ ಸೊಸೆ ಮತ್ತೊಬ್ಬರನ್ನು ಮದುವೆಯಾಗುತ್ತೇನೆ ಎನ್ನುವಾಗ, ತನ್ನ ವಂಶದ ಕುಡಿಯನ್ನು ಕರೆದುಕೊಂಡು ಹೋಗಲು ಬರುವ ಸೊಸೆಗೆ ಹೇಳುವ ಮಾತುಗಳು ವ್ಯಕ್ತಿತ್ವದ ಘನತೆಗೆ ಹಿಡಿದ ಕೈಗನ್ನಡಿ.
ಇಂತಹ ಅತ್ಯದ್ಬುತವಾದ ಕಥೆ-ಕಥಾ ಪಾತ್ರಗಳ ಸೃಷ್ಟಿಯ ಜೊತೆಯಲ್ಲಿ ಅನೇಕ ಪ್ರಮುಖವಾದ,ಸಂಶೋಧನೆಯಿಂದ ಮೂಡಿರುವ ಹಲವಾರು ಸಂಗತಿಗಳು ಕಾದಂಬರಿಯಲ್ಲಿವೆ. ಪ್ರಮುಖವಾಗಿ ನನಗೆ ಪ್ರಸ್ತಾಪಿಸಬೇಕೆಂದು ಅನಿಸಿದ್ದು ಈ ಕೆಳಗಿನವುಗಳು ...
1. ನಾಗರಿಕತೆ ಎನ್ನುವುದು ಒಂದು ಕಾಲದ ಜನರ ಮನಸ್ಸಿನಲ್ಲಿ ಆಳವಾಗಿ ನಿಂತಿರುವ ಮೌಲ್ಯಗಳನ್ನು ಅವಲಂಬಿಸಿರುತ್ತದೆ. ಕಲೆ,ಸಾಹಿತ್ಯ,ಧರ್ಮ,ಭೌತಿಕ ಪ್ರಗತಿ ಇವೆಲ್ಲವುಗಳು ಮೂಲಭೂತವಾಗಿ ಒಂದೇ ಮೌಲ್ಯದ ಆಧಾರದ ಮೇಲೆ ವಿಕಸಿತವಾದ ವಿವರಗಳು. ಮೂಲಭೂತವಾದ ಮೌಲ್ಯಗಳಲ್ಲಿ ಸ್ಪಷ್ಟವಾದ ಪರಿವರ್ತನೆಯಾದಾಗ ಹೊಸ ಯುಗ ಹೊಸ ಇತಿಹಾಸ ಪ್ರಾರಂಭವಾಗುತ್ತದೆ.
2. ಇತಿಹಾಸ ವಿಗತಿಯ ಕಡೆ ಸಾಗುತ್ತಿದೆ ಅಂದರೆ ಅದ್ಃ ಪತನದ ದಾರಿಯಲ್ಲಿ ಸಾಗುತ್ತಿದೆ. - ಹೆಚ್ಚುತ್ತಿರುವ ಪಾತಕಿ ಪೈಶಾಚಿಕ ಕೃತ್ಯಗಳನ್ನು ನೋಡಿದರೆ ಇದು ಸತ್ಯ ಎನ್ನುವುದರಲ್ಲಿ ಸಂದೇಹವಿಲ್ಲ.
ಇಂತಹ ಮಹಾನ್ ಕಾದಂಬರಿಗಳ ಕರ್ತೃವಿಗೆ,ಸಂಶೋಧಕನಿಗೆ ಇನ್ನು "ಜ್ಞಾನಪೀಠ" ಸಿಕ್ಕಿಲ್ಲ ಎನ್ನುವುದೇ ವಿಪರ್ಯಾಸ.
ಆದಷ್ಟು ಬೇಗ ಕನ್ನಡ ಸಾಹಿತ್ಯ ಕೀರಿಟಕ್ಕೆ ಒಂಬತ್ತನೇ ಮುಕುಟ ಮಣಿ ಸೇರಲಿ ಅದು ನಮ್ಮ ಎಸ್ ಎಲ್ ಬಿ ಅವರೇ ಆಗಿರಲಿ ಎನ್ನುವುದು ನನ್ನ ಮಹದಾಸೆ ...
