Monday, November 14, 2011

ಪ್ರವಾಸದಲ್ಲೊಂದು ಪ್ರವಾಸ ...ಸ್ಮ್ರಿತಿ ಪಟಲದಿಂದ

ಪ್ರತಿ ನಿತ್ಯದ I.T.ಜಂಜಾಟದಲ್ಲಿ ಎಲ್ಲಿ ಭಾಷೆಯ ಮೇಲಿನ ಹಿಡಿತ ಜಾರಿ ಹೋಗುತಿದೆಯೋಯಂಬ ಭಯದಿಂದಲೇ ಬರೆಯುವುದನ್ನೂ ಓದುವುದನ್ನು ಹವ್ಯಸವಾಗಿಯಾದರು ಮುಂದುವರೆಸಬೇಕು ಎಂದು ಮನಗಂಡು ಈ ಲೇಖನಕ್ಕೆ ಲೇಖನಿ ಹಚ್ಚುತಿದ್ದೇನೆ.


ಎಲ್ಲೋ ಹತ್ತನೇ ತರಗತಿಯಲ್ಲಿ ಓದಿದ ನೆನಪು..
ಅನುಭವ ಲೇಖನಗಳಲ್ಲಿ ಎರಡು ವಿಧ. ಒಂದು ತಮ್ಮ ಸ್ವಂತ ಅನುಭವ,ಸ್ವಾನುಭವ ಮತ್ತೊಂದು ಮತ್ತೊಬ್ಬರ ಅನುಭವದಿಂದ ಬರುವ ತಿಳುವಳಿಕೆ,ಜ್ಞಾನ,ಪರಿಚಯ ಏನು ಬೇಕಾದರೂ ಅನ್ನಬಹುದು. ಇಲ್ಲಿ ನಾನು ಹೇಳ ಹೊರಟಿರುವುದು ನಿಮಗೆ ಪರಾನುಭವವಾಗಲಿ ಎಂಬ ಆಶಯ.ಇಲ್ಲಿ ನಾ ಹೇಳುವುದರಲ್ಲಿ ಯಾವುದೇ ವಿಶೇಷ ಕಾವ್ಯ-ತತ್ಸಮ-ತದ್ಬವವಾಗಲಿ ಇಲ್ಲ. ಇದು ಕೇವಲ Trip Experience.

"ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ ನಾಳೆ ನನ್ನ ಮದ್ವೆ ಅಂತ .... ;)"... ಹೋ ಹೋ ಹೋ ... ಒಂದು ನಿಮಿಷ ತಾಳಿ... ನಾಳೆ ನನ್ನ ಮದ್ವೆ ಅಂತ ಅಲ್ಲ...ಹೊರನಾಡು ... ಮಲೆನಾಡಿನ ಒಂದು ಸುಂದರ ಪ್ರದೇಶಕ್ಕೆ ಹೊರಟಿದ್ದೆ ಎಂದು ನಿದ್ದೆ ಬರುತಿರಲ್ಲಿಲ್ಲ .. ಆ ರಾತ್ರಿ ಗಂಟೆಗೊಮ್ಮೆ ಎಚ್ಚರ .. ದಿಂಬಿನ ಕೆಳಗಿದ್ದ Mobile ಅಲ್ಲಿ ಸಮಯ ನೋಡುವುದು ಮತ್ತೆ ನಿದ್ರಾ ದೇವಿಗೆ ಶರಣಾಗುವುದು ...


ಹೂಂ ... ಅಂದ ಹಾಗೆ ಅದ್ಯಾಕೋ ಬಹಳ ದಿನಗಲ್ಲಿಂದ ಹೊರನಾಡಿಗೆ ಹೋಗಬೇಕು (ಆಗಲೇ ಭೇಟಿ ನೀಡಿ ಎರಡು ವರ್ಷ ಆಗಿತ್ತು ಎಂಬ ಅಂದಾಜು ...) ಎಂದು ಪದೇ ಪದೇ ಮನಸ್ಸಿಗೆ ಬರುತಿತ್ತು .. ಯಾವ ಯಾವ ಸ್ನೇಹಿತರು ನನಗೆ ಸಾಥ್ ನೀಡಬಹುದೆಂದು ಅನ್ನಿಸಿತೋ ಅವರುಗಳನ್ನೆಲ್ಲ ಕೇಳಿದೆ ಆದರೆ ಫಲಿತಾಂಶ ಮಾತ್ರ ಶೂನ್ಯ... ಹಲವರಿಗೆ ವೀಕೆಂಡ್ ವೊರ್ಕಿಂಗ್.. ಇನ್ನು ಕೆಲವರು ದಸರೆಗೆಂದು ಮನೆಗಳಿಗೆ ತೆರಳಿದ್ದರು ... ನಾನು ಮಾತ್ರ ಕಳೆದ ವರ್ಷ ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಿದ್ದೇ .. ಈ ಭಾರಿ ಕಡಲ ತೀರ ನಗರದ ಆಚರಣೆ ನೋಡಬೇಕೆಂದೇ ಮನೆಗೆ ಹೋಗಿರಲಿಲ್ಲ ... ಸರಿ ಶುಕ್ರವಾರ ಆಫೀಸ್ ಮುಗೀತು ... ವೀಕೆಂಡ್ ಏನು ಮಾಡೋದು...ಮನೇಲೇ ಇದ್ದರೆ "ಪರಮಾತ್ಮ" ನ ವೀಕ್ಷಣೆ ಎಂದಿನಂತೆ ನಳ ಮಹಾರಾಜನ ಕಾರ್ಯ.... ಅಷ್ಟು ಬಿಟ್ರೆ ಮಾತೇನೂ ಇಲ್ಲ.... ಅದಕ್ಕಾಗಿಯೇ ಮನೆಗೆ ಫೋನ್ ಮಾಡಿ ತಂದೆ ತಾಯಿಯರ ಒಪ್ಪಿಗೆ ಪಡೆದೆ .ಬ್ಯಾಗ್ ಕೂಡ ತಯಾರಾಯಿತು .ಮುಂಜಾನೆ 6.0 ಕ್ಕೆ ಬಸ್ 7.0 ಕ್ಕೆ ಮತ್ತೊಂದು ಎಂದು ವಿಚಾರಿಸಿಕೊಂಡು ಸಹ ಆಗಿತ್ತು. ಸರಿ ಮಲಗಿದ್ದೆ ...ಆಗ "ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ"..


ಮುಂಜಾನೆ 5 ಗಂಟೆ.. ಅಲಾರ್ಮ್ .. ಎಂದಿನ ಸೋಂಬೇರಿತನ.. 7 ರ ಬಸ್ಸಿಗೆ ಹೋದರೆ ಆಯಿತು ಎಂದು ನಿರ್ಧರಿಸಿ 6 ಗಂಟೆಗೆ ಮತ್ತೆ ಅಲಾರ್ಮ್ ಪೋಸ್ಟ್ ಪೋನ್. ಸರಿ ಕೊನೆಗೂ ಎದ್ದು ತಯಾರಾಗಿ ಹೊರಟೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ಸ್ಟಾಪ್ ಗೆ. ಅಂದೇ ಗೊತ್ಹಾಗಿದ್ದು ಮಂಗಳೂರಿನಲ್ಲೂ ಮುಂಜಾನೆ ಅಂದವಾಗಿ ಇರುತ್ತದೆ ಎಂದು ...ಅಲ್ಲಿ ತಲುಪಿದ ಮೇಲೆ ಗೊತ್ಹಾಗಿದ್ದು ಬಸ್ 7.30 ಕ್ಕೆ ಎಂದು. ಅಲ್ಲೇ ಎದುರಿಗಿದ್ದ ಶೃಂಗೇರಿ ಯ ಬಸ್ ನಿರ್ವಾಹಕ ನನ್ನು ಬಸ್ ಶೃಂಗೇರಿ ಬಿಡುವ ಸಮಯವನ್ನು ತಿಳಿದುಕೊಂಡೆ.ಬಂತು ವಿಶಾಲ್ ಬಸ್.. ಮಂಗಳೂರು - ಕಳಸ .. ಸರಿ ನಾನೇ ಮೊದಲಿನವನು..ಹತ್ತಿ ಮೂರನೇ ಸೀಟ್ ಅಲ್ಲಿ ಕೂತೆ...ಇಲ್ಲೇ ಶುರುವಾದದ್ದು ಮೊದಲ ಅನುಭವ ... ಸುಮ್ಮನೆ ಓದಿ. ವಿಶೇಷ ವಾದದ್ದು ಏನನ್ನೂ ನಿರೀಕ್ಹಿಸಬೇಡಿ..


ಬಸ್ ತುಂಬುತ್ತಾ ಹೋಯಿತು, ಆದರೆ ನನ್ನ ಪಕ್ಕದ ಜಾಗ ಮಾತ್ರ ಖಾಲಿ ... ಕುಳಿತ ಹುಡುಗರು ಸಹ ಬಲಕ್ಕೆ ನೋಡಿ ಎದ್ದು ಹೋಗುತಿದ್ದರು.. ಸ್ವಲ್ಪ ಹೊತ್ತಿನ ಬಳಿಕ ಅರಿವಾದದ್ದು ಅದು ಲೇಡೀಸ್ ಸೀಟ್ ಎಂದು :( ಮಂಗಳೂರಿನಲ್ಲಿ ಅದು ಸ್ವಲ್ಪ ಸ್ಟ್ರಿಕ್ಟ್ ..ಯಾರಾದರು ಹೆಣ್ಣು ಮಕ್ಕಳು ಎದ್ದೇಳಿ ಎಂದಿದ್ದರೆ ಏಳಲೆಬೇಕಿತ್ತು ಬೇರೆ ವಿಧಿಯೇ ಇರಲಿಲ್ಲ .. ಅಷ್ಟರಲ್ಲಿ ಬಸ್ಸಿನ ಹಿಂದೆ ಸಹ ಜಾಗ ತುಂಬಿ ಹೋಗಿತ್ತು. ಯಾವ ಪುಣ್ಯವೋ ಏನೋ ಯಾರು ಏಳಿ ಎಂದು ಹೇಳಲ್ಲಿಲ್ಲ .ನಾವು ಭಂಡರೆ ಕಿಟಕಿ ಕಡೆ ಮುಖ ಮಾಡಿಕೊಂಡು ಕುಳಿತು ಬಿಟ್ಟೆನು .ಲೇಡೀಸ್ ಸೀಟ್ ಎಂದು ಎದ್ದು ಹೋಗಿದ್ದರೆ ಕಲ್ತುಳಿಥಕ್ಕೆ ಸಿಕ್ಕು ನರಳ ಬೇಕಿತ್ತು. ಬಸ್ಸಿನಲ್ಲಿ ಅಷ್ಟು ಜನ ಜಂಗುಳಿ. ಈ ಅನುಭವವನ್ನು ಮುಂದೆ ಪಾಲಿಸೋಣ ಬಿಡಿ ;) .

ಹುಟ್ಟಿದಾಗಿನಿಂದ ಹುಟ್ಟೂರು ನಾಯಕನಹಟ್ಟಿ ಇಂದ ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕೆ ಎಂದೂ ಒಬ್ಬನೇ ಹೋದ ನೆನಪಿಲ್ಲ. ಅಂಥಹುದರಲ್ಲಿ 5 ಗಂಟೆ ಪ್ರಯಾಣ ಅದು ಒಬ್ಬನೇ .. ನನ್ನನು ನಾನೇ ನಂಬುವ ಸ್ಥಿತಿಯಲ್ಲಿ ಇರಲಿಲ್ಲ . ಆದರೂ ಒಬ್ಬನೇ ಏನೂ ಪ್ರಯಾಣಿಸಲಿಲ್ಲ ಬಿಡಿ .. ನನ್ನ ಜೊತೆ ರಾಜ್, ಬಾಲಸುಬ್ರಮಣ್ಯಂ ,ಚಿತ್ರಾ,ಹಂಸಲೇಖ,ಸೋನು ನಿಗಮ್ ಸಹ ಇದ್ದರು ...ಆ ಮಧುರ ಧ್ವನಿಗಳನ್ನು ಆಸ್ವಾದಿಸುತ್ತಾ ,ನಿತ್ಯ ಸಂದೇಶಗಳನ್ನು ಕಳುಹಿಸುವ ಸ್ನೇಹಿತರ ಜೊತೆ ಸಂಭಾಷಿಸುತ್ತಾ ಪ್ರಯಾಣ ಸಾಗುತಿತ್ತು.ಆಗ ಎದುರಾದದ್ದೇ ಕುದುರೆಮುಖ ರಾಷ್ಟ್ರೀಯ ಸಂರಕ್ಷಿತ ಅರಣ್ಯ ಪ್ರದೇಶ.ಅದರ ಹೆಬ್ಬಾಗಿಲು ಕಂಡೊಡನೆ ನಪಾದದ್ದು ಈ ಹಿಂದೆ ಹೋದ ಅನಿರೀಕ್ಷಿತ ಪ್ರವಾಸ. ಅದನ್ನು ಇಲ್ಲಿ ದಾಖಲಿಸಲೇಬೇಕು ಎಂಬ ಆಶಯದಿಂದಲೇ ಇದಕ್ಕೆ ಶೀರ್ಷಿಕೆಯಾಗಿ "ಪ್ರವಾಸದಲ್ಲೊಂದು ಪ್ರವಾಸ" ಎಂದು ನಾಮಕರಣ ಮಾಡಿದ್ದು...


ಅದೊಂದು ಶನಿವಾರ ಮುಂಜಾನೆ :P ಸರಿ ಸುಮಾರು ಹತ್ತು ಗಂಟೆಯಾಗಿತ್ತೇನೋ.. ಹಾಗೆ ತಿಂಡಿ ತಿನ್ನಲು ಹೊರಗೆ ಬಂದಿದ್ದ ಗೆಳಯ ವತ್ಸ ಹಾಗೂ ಸುಹಾಸ್ ನಮ್ಮ ಮನೆಗೆ ಪ್ರಥಮ ಬಾರಿಗೆ ಬಂದಿದ್ದರು. ಆ ಗೆಳಯರ ಬಳಗ ಅನಿರೀಕ್ಷಿತ ಪ್ರವಾಸ ಮಾಡುವುದರಲ್ಲಿ ಎತ್ತಿದ ಕೈ - ಅದರ ಕರ್ತೃ ರಾಕೇಶ್. ಎಲ್ಲಾದರೂ ಹೋದರೆ ನನನ್ನೂ ಕರೆಯಿರಿ ಎಂದು ಒಮ್ಮೆ ಹೇಳಿದ್ದೆ . ಆಗೆಯೇ ಮಧ್ಯಾಹ್ನ ಕಾಲ್ ಮಾಡಿ ರೆಡಿ ಆಗಿ ಬಾ ಅಂದರು... ನನಗೂ ಅಂತಹ ಒಂದು ಸಾಹಸ ಮಾಡಬೇಕೆಂಬ ಬಯಕೆ ಇದ್ದದ್ದು ನಿಜ. ಹೊರಟೆ. ಸುಹಾಸ್ ಬಂದು ಪಿಕ್ ಮಾಡಿಕೊಂಡು ಹೋದ. ಅವರ ಮನೆಗೆ ಹೋದಮೇಲೆ ತೀರ್ಥಹಳ್ಳಿ ಕುಪ್ಪಳ್ಳಿ ಕಡೆ ಎಂದು ತಿಳಿಯಿತು. ಸಂತೋಷ ಸಹ ಆಯಿತು. ಸರಿ ಅಪ್ಪನಿಗೆ ಫೋನ್ ಮಾಡಿ ಈ ತರ ಪ್ರವಾಸ ಹೋಗುತಿದ್ದೆವೆ ಎಂದು ಹೇಳಿದೆ. ಬೈಕ್ ಅಲ್ಲಿ ಎಂದು ಹೇಳಿದ್ದು ಮಾರನೇ ದಿನ ಬೆಳಿಗ್ಗೆಯೇ :P 


ನಾನೂ ವತ್ಸ ಇಬ್ಬರೂ ಪಶ್ಚಿಮ ಘಟ್ಟಗಳಲ್ಲಿ ಬೈಕ್ ಓಡಿಸುವ ನಿಪುಣರೆನಲ್ಲ. ರಾಕೇಶನ ಹಿಂದೆ ವತ್ಸ. ಸುಹಾಸ್ ನ ಹಿಂದೆ ನಾನು. ನಾಯಕನಹಟ್ಟಿ ಇಂದ ಮಂಗಳೂರಿಗೆ ಪ್ರಯಾಣಿಸುವಾಗಲೆಲ್ಲಾ ತೀರ್ಥಹಳ್ಳಿಯ ಮೂಲಕವೇ. ಒಮ್ಮೆ ಯಾರೋ ಆ ಪ್ರದೇಶದಲ್ಲಿ ಬೈಕ್ ಅಲ್ಲಿ ಹೋದದ್ದು ಕಂಡು ಆ ಆಸೆ ಹುಟ್ಟಿದ್ದು ನಿಜ. ಆದರೆ ಆ ಆಸೆ ಇಷ್ಟು ಬೇಗ ಈಡೇರುತ್ತದೆ ಎಂದೂ ನಂಬಿರಲಿಲ್ಲ.ಒಂದೂವರೆ ದಿನ,ಸರಿ ಸುಮಾರು 400 ಕಿ.ಮಿ ,ಆ ಮಳೆ,ಆ ಹಸಿರು ....ಅದೊಂದು ವಿಶೇಷ ಅನುಭವ .ಆಗುಂಬೆ- ಕತ್ತಲ ಕುಂದಾದ್ರಿ - ತೀರ್ಥಹಳ್ಳಿ - ಅಂಬುತೀರ್ಥ - ಕುಪ್ಪಳ್ಳಿ - ಹಗಲ ಕುಂದಾದ್ರಿ - ಶೃಂಗೇರಿ ... ಹೋಗುವಾಗ ಹೋದದ್ದು ಆಗುಂಬೆಯ ತಿರುವುಗಳಲ್ಲಿ ಹಿಂದಿರುಗಿದ್ದು ಕುದುರೆಮುಖ ಅರಣ್ಯ ಪ್ರದೇಶದಿಂದ...  
ಆಗುಂಬೆಯ ಪ್ರೇಮಸಂಜೆಯ......


ಆಗುಂಬೆಯ ತಿರುವುಗಳಲು ಬರುತಿದ್ದಾಗಲೇ ನಮನ್ನು ಸ್ವಾಗತಿಸಿದ್ದು ದಟ್ಟ ಹಿಮಚ್ಚಾದಿತ ಹಸಿರು ಬೆಟ್ಟಗಳು .ಅದನ್ನು ಕಂಡು ಮುನ್ನೆಡೆವಾಗ ನನ್ನ ಮೊಬೈಲ್ " ಆಗುಂಬೆಯಾ ಪ್ರೇಮ ಸಂಜೆಯಾ " ಹಾಡನ್ನು ಹಾಡಿತು..ಆಗುಂಬೆಗೆ ನನ್ನದು 4 ಭೇಟಿ ಇರಬಹುದು. ಆದರೆ ಒಮ್ಮೆಯೂ ನೇಸರನು ಪಶ್ಚಿಮದಲ್ಲಿ ಲೀನನಾಗುವ ಆ ಅತ್ಯಮೋಘ ದೃಶ್ಯ-ಕಾವ್ಯ ಸವಿಯುವ ಭಾಗ್ಯ ನನದಾಗಿಲ್ಲ. ಈ ಬಾರಿಯೂ ಅದೇ . ನಮ್ಮದೇ ತಪ್ಪು ಬಿಡಿ.ಮುಂಗಾರಿನ ಸಮಯದಲ್ಲಿ ಹೋಗಿ ಸೂರ್ಯಾಸ್ತಮಾನ ಕೇಳಿದರೆ ಹೇಗೆ? ಅಲ್ಲವೇ? ಆದರೂ ಮುಂದೊಂದು ದಿನ ವಿಶೇಷ ವ್ಯಕ್ತಿಯೊಂದಿಗೆ ;) ಹೋಗಬೇಕೆಂಬ ಹಂಬಲವಿರುವುದಂತು ಸತ್ಯ :)


ಅಲ್ಲಿಂದ ಪ್ರಯಾಣ ಕುಂದಾದ್ರಿಯ ಕಡೆಗೆ ... ಆಗಲೇ ಮುಸ್ಸಂಜೆಯಾಗಿತ್ತು .ಆದರೂ ಧೈರ್ಯದಲ್ಲೇ ಹೊರೆಟೆವು . ಕುಂದಾದ್ರಿ ಒಂದು ದೊಡ್ಡ ಬೆಟ್ಟ. ಬೆಟ್ಟದ ತುತ್ತತುದಿಯಲ್ಲಿ ಜೈನ ಬಸದಿ. ನಮ್ಮಂತ ದೈತ್ಯ ಕಾಯದವರನ್ನು ಹಿಂದೆ ಕೂರಿಸಿಕೊಂಡು ಬೈಕ್ ಅಲ್ಲಿ ಆ ಕಾಡಿನಂತಿರುವ ಏರು ಬೆಟ್ಟವನ್ನು ಹತ್ತಿಸುವುದು ಸಾಮಾನ್ಯ ಕಾರ್ಯವೇ ;) ಅಂತು ಎಡವಿ ಇಳಿದು ಹತ್ತಿ ತುದಿಯನ್ನು ಮುಟ್ಟಿದೆವು. ಮುಂಗಾರಿನ ದಟ್ಟ ಕಾರ್ಮೋಡ ಕವಿದಿದ್ದರಿಂದ ಆ ಸಂಜೆ ಕತ್ತಲು ಆವರಿಸಿತ್ತು.ಅಲ್ಲೇ ಶುರುವಾದದ್ದು ಪೀಕಲಾಟ . ಕಾಡು ಕತ್ತಲು .ಜೋರು ಮಳೆ ... ಪಕ್ಕದಲ್ಲೇ ಮೋಹಿನಿ ಮನೆಯಂತಿದ್ದ ಪಾಳು ಗೃಹ.. ಯಾರಾದರು ಹೊಡೆದು ಹಾಕಿದರೂ,ಯಾವುದಾದರು ಕಾಡು ಪ್ರಾಣಿ ಧಾಳಿ ನಡೆಸಿದರೂ ಕೇಳಲು ಒಂದು ನರ ಪಿಳ್ಳೆ ಸಹ ಅಲ್ಲಿರಲಿಲ್ಲ .ಜೀವನದಲ್ಲಿ ಭಯಂಕರ ಭಯ ಕಂಡ ಮೊದಲ ಸ್ಥಳ ಕುಂದಾದ್ರಿ.ಅಂತಹ ಸ್ತಿತಿಯಲ್ಲಿ ನಮ್ಮ ಸುಹಾಸ್ ಜಿಂದಗಿ ನಾ ಮಿಲೆಗಿ ದುಬಾರದ ಹೃತಿಕ್ ಸ್ಟೈಲ್ ಅಲ್ಲಿ ಆಫೀಸ್ ನ ಮ್ಯಾನೇಜರ್ ಗೆ ಕರೆ ಮಾಡಿದ :D :P 


ಆ ಕತ್ತಲಲ್ಲೇ ಮೆಟ್ಟಿಲುಗಳನ್ನು ಹತ್ತಿ ತುದಿಗೆ ಹೋದೆವು . ಕತ್ತಲು,ಎಲ್ಲವೂ ಅಸ್ಪಷ್ಟ .ಆದರೆ ಅಲ್ಲಿಂದ ಕಣ್ಣು ಕೋರೈಸುವ ವಿಹಂಗಮ ನೋಟ ಇರುವುದು ಸ್ಪಷ್ಟವಾಯಿತು.ಅದಕ್ಕಾಗಿಯೇ ರಾಕೇಶ್ ಮತ್ತೆ ಮರುದಿನ ಬರೋಣ ಅಂತ ಹೇಳಿದ. ಮತ್ತೆ ಮಾರನೆದಿನ ಬರುವ ನಿರ್ಧಾರ ...ಆ ಕತ್ತಲಿನ ಸಮಯದಲ್ಲಿ ಜೈನ ದೇವಾಲಯದ ನಂದಾದೀಪ ಮಾತ್ರ ಬೆಳಗುತಿತ್ತು. ಬೆಟ್ಟದ ಮೇಲಿಂದ ಜೀವ ಕೈಯಲ್ಲಿ ಹಿಡಿದುಕೊಂಡು ದೇವರ ಧ್ಯಾನಿಸುತ್ತಾ ಕೆಳಗೆ ಬಂದರೆ ಸುಮಾರು 7-8 ಅಡಿ ಎತ್ತರದ ಕಾಡು ಕೋಣಗಳ ದೊಡ್ಡ ಹಿಂದೂ ನಮನ್ನು ಸ್ವಾಗಿತಿಸಲು ನಿಂತಿತ್ತು. ಒಹ್ ... ಅಂತಹ ಅನುಭವ ಮತ್ತೆಲೂ ಆಗಲು ಸಾಧ್ಯವೇ ಇಲ್ಲ . ನಾವುಗಳು ಶಬ್ದಮಾಡದೆ ನಿಂತೆವು . ಅವುಗಳು ದಾರಿ ಬದಿಗೆ ಸರಿದವು.ಎದ್ದೆವೋ ಬಿದ್ದೆವೋ ಎಂದು ಅಲ್ಲಿಂದ ಕಾಲ್ಕಿತ್ತೆವು .ಹಗಲಿನ ರಶ್ಮಿಯ ಕಿರಣಗಳಲ್ಲಿ ಕಣ್ಮನ ಸೆಳೆಯುವ ಆ ಹಚ್ಚಾದಿತ ಕಾಡಿಗೆ ಕತ್ತಲು ಕವಿದಾಗ ಇರುವ ಭೀಕರತೆ,ಭೀಭತ್ಸತೆ ಅಂದೇ ಅರಿವಾದದ್ದು. .. ಮಳೆಯಿಂದ ಹಾಳಾಗಿರುವ ಆ ರಸ್ತೆ,ನಮನ್ನು ಪರೀಕ್ಷಿಸಲೆಂದೇ ಮತ್ತೆ ಮತ್ತೆ ಹಾಡುತ್ತಿರುವ ಮಳೆ. ಅಂತೂ ಆ ಭಯಕ್ಕೆ ಮೊಬೈಲ್ಲ್ಲನಲ್ಲಿದ ಎಲ್ಲಾ ಭಕ್ತಿಗೀತೆಗಳು ಮೊಳಗಿದ್ದವು . ಆ ಸ್ತಿತಿಯಲ್ಲಿ ಗಾಡಿ ಹೊಡಿಸುತಿದಿದ್ದು ಸುಹಾಸ್ ;) ಹೆಲ್ಮೆಟ್ ಧರಿಸಿ ಹಿಂದೆ ಕೂತಿದವನು ನಾನು. ಥ್ಯಾಂಕ್ಸ್ ಟು ಸುಹಾಸ್. ಅಂತೂ ಇಂತೂ ತೀರ್ಥಹಳ್ಳಿ ಸೇರಿ,ಅಲ್ಲೇ ತಂಗಿ ಮರುದಿನ ಮತ್ತೆ ಪ್ರಯಾಣ ಶುರು ಮಾಡಿದೆವು. ಮೊದಲು ಅಂಬುತೀರ್ಥ.ಶರಾವತಿಯ ಉಗಮ ಸ್ಥಳ.ಅಂತಹ ವಿಶೇಷವೇನೂ ಇರಲಿಲ್ಲ.ಆದರು ಫೇಸ್ ಬುಕ್ ಪ್ರೊಫೈಲ್ ಪಿಕ್ ಆಗಬಹುದಂತಹ ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. 400 ಕಿ.ಮಿನ ಆ ಪ್ರಯಾಣದಲ್ಲಿ ನಾನೂ ಸಹ ಎಂಟರಿಂದ ಹತ್ತು ಕಿ.ಮಿ ಗಾಡಿ ಓಡಿಸಿದೆ.;) ;) ಹ ಹ ಹ ... ಅಲ್ಲಿಂದ ಹೋದದ್ದೇ ಕುಪ್ಪಳ್ಳಿಗೆ. 


"ತೆರದಿದೆ ಮನೆ ಓ ಬಾ ಅತಿಥಿ..." ಎಂದು ಹಾಡಿದ ರಸರುಷಿ,ಯುಗದ ಕವಿ,ಕರ್ನಾಟಕ ರತ್ನ,ರಾಷ್ಟ್ರ ಕವಿ ಪುಟ್ಟಪ್ಪನವರ ಊರು. ಅಲ್ಲಿನ ಹೆಬ್ಬಾಗಿಲು ಪ್ರವೆಶಿಸುತಿದ್ದಂತೆಯೇ ನನ್ನ ಕರಗಂಟೆ "ಎಲ್ಲಾದರು ಇರು ಎಂತಾದರು ಇರು..." ಗೀತೆಯನ್ನು ಮೊಳಗಿಸಿತ್ತು. ಅಲ್ಲಿನ ಆ ಸೌಂದರ್ಯ ಆ ಸೊಬಗನ್ನು ಕಂಡು ಸ್ನೇಹಿತ ವತ್ಸ ಹೇಳಿದ ಮಾತು "ಇಲ್ಲಿ ಯಾರು ಹುಟ್ಟಿದರೂ ಕವಿಯಾಗುತ್ತಾರೆ "ಎಂಬ ಮಾತು ಅಕ್ಷರಶಃ ಸತ್ಯವೆನ್ನಿಸಿತು. ಅವರ ಮನೆಯನ್ನೇ ಸರ್ಕಾರದವರು ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಿದ್ದಾರೆ ... ಸುಂದರವಾಗಿದೆ.. ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ಸ್ಥಳ ಕುಪ್ಪಳ್ಳಿ....
ಅಲ್ಲಿನ ಕಡುಗೋಲಿನ ಸಾಕ್ಷಿಯಾಗಿ "ಮಲೆಗಳಲ್ಲಿ ಮಧುಮಗಳು" ಗ್ರಂಥದ ಒಂದು ಹಾಳೆಯನ್ನು ಅಂಟಿಸಿದ್ದರು.ಆ ಹಾಳೆಯಲ್ಲಿ ನನ್ನ ನಯನಗಳನ್ನು ಸೆಳೆದದ್ದು,ನನ್ನ ಕರ್ಣಗಳಲ್ಲಿ ಇನ್ನೂ ಝೇಂಕಾರ ಮಾಡುತ್ತಿರುವುದೂ " ಅಗ್ನಿಯು ತನ್ನ ಜಿಹ್ವೆಯನ್ನು ಚಾಚಿ ಪಾತ್ರೆಯ ಬೆನ್ನನ್ನು ನೆಕ್ಕುತ್ತಿದನು ...." ಎಂಬ ಸಾಲುಗಳು.ಅದಕ್ಕೆ ಅವರು ಮಹಾಕವಿ... ಅದು ಅವರು ಪಾತ್ರೆಯ ಕೆಳಗಿದ್ದ ಒಲೆಯನ್ನು ವರ್ಣಿಸುವ ಬಗೆ... ಅಲ್ಲಿಂದ ಅವರ ಸಮಾಧಿ ಸ್ಥಳ ಕವಿಶೈಲಕ್ಕೆ ಹೋದೆವು. ಅದು ಅವರು ಕಾವ್ಯ-ಗ್ರಂಥಗಳನ್ನು ರಚಿಸುತಿದ್ದ, ಪ್ರಕೃತಿ ತನ್ನ ರಮ್ಯ ಕಾವ್ಯವನ್ನು ತೆರದಿಟ್ಟಿರುವ ಸ್ಥಳ . ಅಲ್ಲಿ ಹೆಬ್ಬಂಡೆಯ ಮೇಲೆ ಅವರ ಹಸ್ತಾಕ್ಷರ ಸಹವುಂಟು. ಅಲ್ಲಿಂದ ಹಿಂತಿರುವಾಗ ರಾಕೇಶ್-ವತ್ಸ ಕಾಳಿಂಗ ಸರ್ಪವನ್ನು ಕಂಡರಂತೆ.. ನಮ್ಮ ಕಣ್ಣಿಗೆ ಅದು ಬೀಳಲಿಲ್ಲ.... ಅಲ್ಲಿಂದ ಮುಂದೆ ಕನ್ನಡದ ಮತ್ಹೊಬ್ಬ ಶ್ರೇಷ್ಠ ಲೇಖಕ,ಕನ್ನಡ ಸಾರಸ್ವತ ಲೋಕದ ದಿಗ್ಗಜ ದಿ.ಪೂರ್ಣಚೇಂದ್ರ ತೇಜಸ್ವಿಯವರ ಸಮಾಧಿ ಕಂಡು ಮನ ಮರುಗಿತು...ಆ ಪುಣ್ಯ ಕಾಶಿಯಲ್ಲಿ ನಮ್ಮ ನೆನಪು ಇರಲೆಂದು ಆ ಮ್ಯೂಜಿಯಂನಲ್ಲಿದ್ದ ವಿಸಿಟರ್ ಬುಕ್ ನಲ್ಲಿ ನಮ್ಮ ಅಭಿಪ್ರಾಯವನ್ನು ಮುದ್ರಿಸಿ ಸಹಿ ಹಾಕಿ ಬಂದೆನು... ನಂತರ ಪ್ರಯಾಣ ಮತ್ತೆ ಕುಂದಾದ್ರಿಯೆಡೆಗೆ . 
ತುಂಗಾ ನದಿ.....

ಕುಂದಾದ್ರಿಯ ವಿಹಂಗಮ ನೋಟ ....

ವತ್ಸ,ನಾನು,ರಾಕೇಶ್ ಹಾಗು ಸುಹಾಸ್... ಕುಪ್ಪಳ್ಳಿಯ ಕವಿಶೈಲದಲ್ಲಿ ....


ಹಿಂದಿನ ರಾತ್ರಿ ಭಯಾನಕವಾಗಿ ಕಂಡ ಕಾಡು ಇಂದು ಅಕ್ಷಿಗಳಿಗೆ ಮುದನೀಡುತಿತ್ತು.ಆದರೆ ಯಾವುದು ಆಗಬಾರದೆಂದು ಅಂದುಕೊಂಡಿದ್ದೆವೋ ಅದು ಆಗಿ ಹೋಗಿತ್ತು ;) .. ನಾನು ಸುಹಾಸ್ ಗಾಡಿಯಿಂದ ಬಿದ್ದು ಗಾಯಮಾಡಿಕೊಂಡಿದ್ದೆವು . ಸ್ವಲ್ಪ ನೆತ್ತರೂ ಸಹ ಹರಿದಿತ್ತು :(... ಆದರೂ ಏನು ಮಾಡುವುದು ... ಸ್ವಲ್ಪ ಸುಧಾರಿಸಿಕೊಂಡು ಪದೇ ಪದೇ ಸಾರಿ ಹೇಳುತ್ತಿದ್ದ ಸುಹಾಸ್ ನ ಬಾಯಿಗೆ ಬೀಗ ಹಾಕಿಸಿಕೊಂಡು ಮತ್ತೆ ಕುಂದಾದ್ರಿಯ ತುತ್ತತುದಿಯನ್ನು ಮುಟ್ಟಿದೆವು...ದೇವರ ನಿಸರ್ಗ ಸೃಷ್ಟಿಯ ಅಪೂರ್ವ ಕಲಾಕೃತಿಯನ್ನು ಮನ ತುಂಬಿಸಿಕೊಂಡು ಮಾನವ ಸೃಷ್ಟಿಯ ಕಣ್ಣಿನಲ್ಲಿ (ಕ್ಯಾಮೆರಾ ;) ) ಸೆರೆಹಿಡಿದುಕೊಂಡು ಮಂಜಿನಲ್ಲಿ ಮಿಂದೆವು ... ಅಲ್ಲಿಂದ ಹೊರಟು ಶೃಂಗೇರಿಯ ಶಾರದಾ ಮಾತೆಯ ದರ್ಶನ ಮುಗಿಸಿಕೊಂಡು ಕಡಲತೀರ ನಗರದೆಡೆಗೆ ಪ್ರಯಾಣಿಸಿದೆವು ....  
ವತ್ಸ ಇನ್ನೊದು ಸಂದರ್ಭದಲ್ಲಿ ಹೇಳಿದ ಮಾತು ಇಲ್ಲಿಯೂ ಸೂಕ್ತ ಅನ್ನಿಸುತ್ತಿದೆ. "ಜೀವನದಲ್ಲಿ ರಿಸ್ಕ್ ತಗೋಬೇಕು.ಇಲ್ಲದಿದ್ದರೆ ಜೀವನ ಪುಸ್ತಕದ ಪುಟಗಳೆಲ್ಲ ಖಾಲಿ ಖಲಿಯಂತೆ "..lol... ನಿಜ ಆದರೂ... ಅದು ಅವರವರ ಭಾವಕ್ಕೆ ಭಕುತಿಗೆ ... ಥ್ಯಾಂಕ್ಸ್ ಟು ವತ್ಸ,ಸುಹಾಸ್ ಅಂಡ್ ರಾಕೇಶ್.. ಇದೆ ನಾನು ನನ್ನ ಪ್ರವಾಸದಲ್ಲಿ ನೆನಪಿಸಿಕೊಂಡ ಪ್ರವಾಸ.... 


ಸರಿ.. "ದೋಣಿ ಸಾಗಲಿ ಮುಂದೆ ಹೋಗಲಿ..." ಎಲ್ಲಿ ನಿಲ್ಲಿಸಿದ್ದೆ..? ಕುದುರೆಮುಖ ರಕ್ಷಿತಾರಣ್ಯದಲ್ಲಿ ಅಲ್ಲವೇ... ಅಲ್ಲಿನ ಹಸಿರಿನ ಸಿರಿ ಎಂತಹ ಜಡ ದೇಹದವರನ್ನು ತನ್ನತ್ತ ಸೆಳೆದು ಮಂತ್ರ ಮುಗ್ದ್ದರನ್ನಗಿಸುತ್ತೆ .. ಒಂದೆಡೆ ಎತ್ತರದ ಬೆಟ್ಟಗಳು.. ಮತ್ತೊಂದೆಡೆ ಕೆಳಗೆ ನದಿಯ ನಿನಾದ .. ಎಷ್ಟು ವರ್ಣಿಸಿದರೂ ಬಣ್ಣಿಸಲು ಸಾಲದು .... ಆ ಕಾಡಿನಲ್ಲಿ ಮೊದಲು ರಸ್ತೆ ಹೇಗೆ ಮಾಡಿದರು ಎಂಬುದೇ ಯಕ್ಷ ಪ್ರಶ್ನೆ...ಮಧ್ಯೆ ಒಂದು ಜಾಗದಲ್ಲಿ ರಸ್ತೆ ಕವಲು ಒಡೆಯುತ್ತದೆ..ಒಂದು ರಸ್ತೆ ಶೃಂಗೇರಿಯ ಕಡೆ ಮತ್ತೊಂದ್ ಹೊರನಾದಿನೆಡೆಗೆ ... ಬಸ್ ಮುಂದೆ ಸಾಗಿದಂತೆ ಇನ್ನು ಸುಂದರ ನಯನ ಮನೋಹರ ದೃಶ್ಯಕಾವ್ಯ ... ಇಲ್ಲಿಯವರೆಗೆ ಇದದ್ದು ಕಾಡು ಬೆಟ್ಟಗಳು...ಈಗ ಹಸಿರು ಹುಲ್ಲನ್ನು ತನ್ನ ಸೀರೆಯನ್ನಾಗಿ ಧರಿಸಿ ಕಂಗೊಳಿಸುವ ಭೂರಮೆ .. ಅಲ್ಲಿ ಹನುಮನಗುಂಡಿ ಜಲಪಾತವಿದೆ .. (ನೋಡಿಲ್ಲ ಮುಂದೊಂದು ದಿನ ನೋಡಬೇಕು..) ನಂತರ ಲಕ್ಯಾ ಡ್ಯಾಮ್... ತದನಂತರ ತನಲ್ಲಿದ್ದ ಖನಿಜವನೆಲ್ಲ ದುರಾಸೆಯ ಮಾನವರಿಗೆ ದಾನ ಮಾಡಿ ಬರಿ ಖಾಲಿ ಒಡಲಲ್ಲಿರುವ ಕುದುರೆಮುಖ ... ಈಗ ಹಳೆಯದನೆಲ್ಲ ಮರೆತು ಮತ್ತೆ ತನ್ನಲ್ಲಿ ಹಸಿರಿನ ಚಿಗುರನ್ನು ಮೊಳಕೆ ಹೊಡೆಸುತಿದ್ದೆ ನಿಸರ್ಗ ಎಂದು ಭಾಸವಾಯಿತು .. ವತ್ಸ ನ ಪ್ರಕಾರ ಅದು Switzerland ;) ಈಗೆನೋಡನೋಡುತ್ತಲೇ ಕಳಸ ಬಂದೇಬಿಟ್ಟಿತು ... ನಾನಾಗಲೇ 5  ಗಂಟೆ ಪ್ರಯಾಣಿಸಿದ್ದೆ.


ಕಳಸದಿಂದ 8 ಕಿ.ಮಿ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವ ಕ್ಷೇತ್ರ.. ಭದ್ರೆಯ ದಡದಲ್ಲಿರುವ ಹೊರನಾಡು... ಹೊರನಾಡು ಸ್ವಲ್ಪ ಪರಿಚಿತ ಸ್ಥಳವೆ ...ತಂದೆ-ತಾಯಿ ಹಾಗು ನಾಯಕನಹಟ್ಟಿಯ ನಮ್ಮ ಪ್ರವಾಸ ಬಳಗದ ಜೊತೆ 3 - 4 ಬಾರಿ ಬಂದಿದ್ದೆ...ಎಲ್ಲೆಲ್ಲಿ ಏನೇನಿದೆ ಎಂದು ತಿಳಿದಿತ್ತು..ಅದಕ್ಕಾಗಿಯೇ ಒಬ್ಬನೇ ಹೋಗಿ ಇದ್ದು ಬರಬಹುದೆಂಬ ನಂಬಿಕೆ ಇದದ್ದು. ನೇರವಾಗಿ ಅಲ್ಲಿರುವ ದೇವಾಲಯದ ಆಡಳಿತ ಕಚೇರಿಗೆ ಹೋಗಿ ವಿಚಾರಿಸಿದರೆ rooms only for family bachelors ಗೆ ಕೊಡುವುದಕ್ಕೆ ಸಾಧ್ಯವೇ ಇಲ್ಲ ಎಂಬ ಉತ್ತರ .. ಇದು ಸ್ವಲ್ಪ ಚಿಂತೆಗೆ ಎಡೆಮಾಡಿತು ..ಆದರೆ ಹೊರನಾಡಿನಲ್ಲಿರುವ ವಿಶೇಷತೆ ಎಂದರೆ ಅಲ್ಲಿ ರಾತ್ರಿ ದೇವಾಲಯದಲ್ಲೇ ಮಲಗಲು ಸಕಲ ವ್ಯವಸ್ಥೆ ಮಾಡಿಕೊಡುವರು...ಎಲ್ಲವು ಭಕ್ತಾದಿಗಳ ಅನುಕೂಲಕ್ಕಾಗಿ ..ಅಲ್ಲಿಗೂ ಒಮ್ಮೆ ಲಾಡ್ಜ್ ವಿಚಾರಿಸಿದೆ.. 750 ರೂ. ಎಂಬ ಉತ್ತರ .. ಅದಕ್ಕಾಗಿಯೇ ರಾತ್ರಿ ದೇವಾಲಯದಲ್ಲೇ ತಂಗಿದರಾಯಿತು ಎಂದು ನಿರ್ಧರಿಸಿ ಲಗೇಜನ್ನು ಅಲ್ಲೇ ಇದ್ದ ಲಗೇಜು ರೂಮಿನಲ್ಲಿ ಇರಿಸಿದೆನು... ಸರಿ ಬೆಳ್ಳಿಗ್ಗೆಯಿಂದ ಏನನ್ನೂ ತಿಂದಿರಲಿಲ್ಲ . ಮೊದಲು ಸರತಿಯಲ್ಲಿ ನಿಂತು ಜಗನ್ಮಾತೆಗೆ ನಮಿಸಿ ಕಂಗಳಲ್ಲಿ ಆ ಭವ್ಯ ಮೂರ್ತಿಯನ್ನು ತುಂಬಿಸಿಕೊಂಡು ನಂತರ ಅನ್ನ ದಾಸೋಹದ ಸರತಿಯಲ್ಲಿ ನಿಂತು ಪ್ರಸಾದವನ್ನು ಸ್ವೀಕರಿಸಿದೆನು ... ದಸರೆ ರಜೆಯಾಗಿದ್ದರಿಂದ ಸ್ವಲ್ಪ ಜನ ಜಂಗುಳಿ..ಅಲ್ಲಿ ಇಲ್ಲಿ ಸುತ್ತಾಡಿ ಮೊಬೈಲ್ ಗೂ ಸ್ವಲ್ಪ ಊಟ ಮಾಡಿಸಿದೆನು ;) charging ರೀ ;) ಸಂಜೆ ಏನು ಮಾಡುವುದು .. ನಮ್ಮ vodafone ಸಿಗ್ನಲ್ ಬೇರೆ ಇರಲಿಲ್ಲ ..ಸರಿ ಹಾಗೆ ಸುಮ್ಮನ್ನೇ ಕಳಸಕ್ಕೆ ಹೋಗಿ ಬರೋಣವೆಂದು ಎಂದುಕೊಂಡು ಹೋಗಿ ಕಲಸೇಶ್ವರನ ದರುಶನ ಮಾಡಿ ಕಾಲ್-ಮೆಸೇಜ್ ಗಳನ್ನೂ ಮಾಡುತ್ತಾ ಸ್ವಲ್ಪ ಕಾಲ ಕಳೆದನು .. ಚುರುಮುರಿಯನ್ನು ತಿಂದೇನು ... ;) ಮತ್ತೆ ಹೊರನಾಡಿಗೆ ಹಿಂತಿರುಗಿ ಸ್ನಾನಮುಗಿಸಿ ಮಡಿಯುಟ್ಟು ಮಹಾಪೂಜೆಗೆ ತಯರಾದೆನು...ಅಲ್ಲಿ 7 ರೂ ಗೆ ಒಂದು ಬಕೆಟ್ ಬಿಸಿ ನೀರು ಸಹ ಸಿಗುತ್ತದೆ..ಪತಿ ಬಾರಿ ತಂದೆ ತಂದುಕೊಡುತ್ತಿದ್ದರು .. ಅದರ ಹಿಂದಿನ ಪರಿಶ್ರಮ ಅಂದೇ ತಿಳಿದದ್ದು ಅಷ್ಟು ಜನ .... ಮಕ್ಕಳ ಬಗ್ಗೆ ಎಷ್ಟು ಕಾಳಜಿ ಇರುತ್ತದೆ ನಮ್ಮ ತಂದೆ ತಾಯಿಗಳಿಗೆ.. ಅವರೊಡನೆ ಹೋದ ಜಾಗಕ್ಕೆ ಒಮ್ಮೆ ಒಬ್ಬರೇ ಹೋಗಿ ಬನ್ನಿ :) 9 .30 ಕ್ಕೆ ಮುಗಿಯಬೇಕ್ಕಿದ್ದ ಮಹಾಪೂಜೆ ಅಂದು ಯಾವುದೋ ಕಾರ್ಯಕ್ರಮವಿದ್ದದ್ದರಿಂದ ಶುರುವಾದದ್ದೇ ರಾತ್ರಿ 10 .15 ರ ಸುಮಾರಿಗೆ ಹೊರನಾಡಿಗೆ ಹೋದರೆ ಆ ಮಾಹಾಮಂಗಲಾರತಿಯನ್ನು ಕಣ್ಣು ತುಂಬಿಸಿಕೊಳ್ಳದೆ ಹಿಂತಿರುಗಬೇಡಿ..ಎಂತಹ ನಾಸ್ತಿಕರನ್ನು ದೈವ ಭಕ್ತರಾಗುವುದರಲ್ಲಿ ಸಂದೇಹವೇ ಇಲ್ಲ ... ಅಷ್ಟು ಸುಂದರ.. ಪ್ರತಿ ದಿನ ಮೂರು ಬಾರಿ ನಡೆಯುತ್ತದೆ ಆ ಮಹಾಪೂಜೆ.. ನನ್ನ ಪುಣ್ಯವೋ ಎಂಬಂತೆ ಎಲ್ಲ ವಿಶೇಷ ಪೂಜೆಗಳು ನಡೆದು ಮಹಾಪೂಜೆ ಮುಗಿದಾಗ ರಾತ್ರಿ 11 .30 ..ಊಟ ನಿದ್ದೆಗೆ ಸ್ಥಳ. ಅದು ಮುಂದಿನ ಚಿಂತೆ. ದಾಸೋಹ ಮುಗಿದಿತ್ತು..ಆದರು ತಾಯಿಯ ಮಹಿಮೆ ಎಂಬಂತೆ ದಾಸೋಹದ ಊಟವೂ ಸಿಕ್ಕಿತು. ಮಲಗಲು ಜಾಗವು ಸಿಕ್ಕಿತು ... ಕಣ್ಣು ತುಂಬಾ ನಿದ್ದೆಯೂ ಆಯಿತು ....
ಮುಂಜಾನೆ ಮತ್ತೆ ವರ್ಣಿಸಬೇಕೆ.. ಸುತ್ತ ಬೆಟ್ಟಗಳ ಕೋಟೆಯಲ್ಲಿ ಮಧ್ಯ ಅಗಸ್ಥ್ಯರು ಸ್ಥಾಪಿಸಿರುವ ದೇವ ಮಂದಿರ ಹೊರನಾಡಿನ ದೇವಾಲಯ..ಮುಜಾನೆಯ ಆ ಮಂಜು ಮುದನೀಡುತಿತ್ತು... ರವಿ ಇನ್ನು ಶಶಿಯಂತೆಯೇ ಗೋಚರಿಸುತ್ತಿದ್ದ..ಮತ್ತೆ ತಯಾರಾಗಿ ದೇವರಿಗೆ ನಮಿಸಿ ಶ್ರೀ ಕ್ಷೇತ್ರ ಶೃಂಗೇರಿಗೆ ಪ್ರಯಾಣ ...


8 ಗಂಟೆಯಾದರೂ ಬೆಳ್ಳಗಿನ 6 ರ ಅನುಭವ ... ರಸ್ತೆಯ ಇಕ್ಕೆಲಗಳಲ್ಲಿ ಕಾಫಿ ತೋಟಗಳು .... ಅಲ್ಲಲ್ಲಿ ಕಾಣಸಿಗುವ ಜುಳು ಜುಳು ಹರಿಯುವ ಝರಿಗಳು. ಚಿಕ್ಕಮಗಳೂರು ಜಿಲ್ಲೆಯ ಪ್ರಾಕೃತಿಕ ಸೌಂದರ್ಯಕ್ಕೆ ಹೃನ್ಮನ ತಣಿದಿತ್ತು...ಬಸ್ ಮೇಲೆ ಇದದ್ದು ಫಾಸ್ಟ್ express ...ಬಸ್ ನವನು ಮಾತ್ರ ಹೆಜ್ಜೆ ಹೆಜ್ಜೆಗೂ ಸ್ಟಾಪ್.. ನಾವು ಹೀಗೆ ಬೇರೆಯವರ ಬಗ್ಗೆ ಯೋಚಿಸುವುದೇ ಇಲ್ಲ ..ಅಲ್ಲಿನ ಪ್ರದೇಶದಲ್ಲಿ ಬಸ್ಸುಗಳೇ ವಿರಳ .. ಅಂತಹ ರಸ್ತೆಯಲ್ಲಿ ಬಸ್ ಇರುವುದೇ ಆಶ್ಚರ್ಯ ;) ಅದಕ್ಕಾಗಿ ಅವನು ಪದೇ ಪದೇ ನಿಲಿಸುವುದು ತಪಲ್ಲವೆನ್ನಿಸಿತು ... ಅಂತು ಸರಿ ಸುಮಾರು 4 .30 ಗಂಟೆ ಪ್ರಯಾಣದ ನಂತರ ಶೃಂಗೇರಿ ತಲುಪಿದ್ದೆನು.. ಶಂಕರಾಚಾರ್ಯ ಸ್ಥಾಪಿಸಿರುವ ಶೃಂಗೇರಿ ಪೀಠ ... ವಿದ್ಯಾ ದೇವತೆ .. ಸಂಗೀತದಾತೆ , ವರನೀಡುವ ವಾಣಿ ಶಾರದಾಂಬೆಯ ದಿವ್ಯ ಸನ್ನಿಧಿ ... ಅಂದು ಶ್ರೀ ಮಾತೆಗೆ ನವಿಲು ವಾಹನದ ಅಲಂಕಾರ..ನಮಸ್ಕರಿಸಿ ದರುಶನ ಮುಗಿಸಿದೆನು... ನೀವು ಎಲ್ಲಿಯೇ ಇರಲಿ,ಹೇಗೆ ಇರಲಿ ಸಮಯಕ್ಕೆ ಸರಿಯಾಗಿ ಹೊಟ್ಟೆ ಮಾತ್ರ ತಾಳ ಹಾಕದೆ ಇರುವುದಿಲ್ಲ...ಇವತ್ತು ಸಹ ಮುಂಜಾನೆಯಿಂದ ಏನೂ ತಿಂದಿರಲಿಲ್ಲ .. ನೇರವಾಗಿ ಶೃಂಗೇರಿಯ ದಾಸೋಹದಲ್ಲಿ ಊಟ...ಇಲ್ಲಿಯವರೆಗೂ ನೋಡಿರುವ ಎಲ್ಲ ದೇವಾಲಯಗಳಿಗಿಂತ ಇಲ್ಲಿ ಅಚ್ಚು ಕಟ್ಟು ಆ ಏರ್ಪಾಡು..ಮೊದಲು ಹೊಟ್ಟೆ ಪೂಜೆ ನಂತರ ಅಲ್ಲೇ ಇದ್ದ ಇನ್ನುಳಿದ ದೇವಾಲಯಗಳಿಗೆ ಭೇಟಿ...
ಅಲ್ಲಿಂದ ಸಿರಿಮನೆ ಜಲಪಾತ ಹತ್ತಿರ..ಹೋಗಬಹುದೆಂಬ ಮನಸಿದ್ದಿದ್ದು ನಿಜ.. ಆದರೆ ಕಾರಣಾಂತರಗಳಿಂದ ಹೋಗಲು ಆಗಲಿಲ್ಲ :( ಮೊದಲ ದಿನ ಸ್ಟೇಟ್ ಬ್ಯಾಂಕ್ ನಲ್ಲಿ ವಿಚಾರಿಸಿದ್ದ 1 .30 ರ ಆ ಬಸ್ ಹಿಡಿದು ಸುಮಾರು 6 ಗಂಟೆಗೆ ಮಂಗಳೂರು ಸೇರಿದೆ. ಅಂದ ಹಾಗೆ ಹಿಂತಿರುಗುವಾಗಲೂ ಸಿಕ್ಕಿದ್ದು ಲೇಡೀಸ್ ಸೀಟ್ ;) ಆದರೆ ಕಂಡಕ್ಟರ್ ಅಲ್ಲೇ ಹೇಳಿದ್ದ ಸರ್ ಕಾರ್ಕಳ ಬಂದ ಮೇಲೆ ಬಸ್ ಖಲಿಯಾಗುತ್ತೆ ಸೀಟ್ ಚೇಂಜ್ ಮಾಡಿ ಎಂದು ... ಮೊದಲ ದಿನದ ಆ ಅನುಭವವನ್ನು ಚಾಚು ತಪ್ಪದೇ ಪಾಲಿಸಿದ್ದೆನು.. ರಾತ್ರಿ ನ್ಯೂಸ್ ನೋಡಿದಮೇಲೆ ತಿಳಿದದ್ದು ನಾನಿದ್ದ ಪ್ರದೇಶದಲ್ಲಿ ನಕ್ಸಲರು ಪೇದೆಯೊಬ್ಬನನ್ನು ಕೊಂದಿದ್ದರು ಎಂದು.. ಅದಕ್ಕಾಗಿಯೇ ದಾರಿಯಲ್ಲಿ ಅಲ್ಲಲ್ಲಿ ಚೆಕ್ ಪೋಸ್ಟ್ ಗಳು ಇದ್ದವು ... ಆ ನಕ್ಸಲರಿಗೆ ಹತ್ತು ಗುಂಡಿಗೆಗಳೇ ಇರಬೇಕು .. ಅಂತಹ ಆ ದಟ್ಟ ಅರಣ್ಯದಲ್ಲಿ ಆ ಕತ್ತಲಲ್ಲಿ ಹೇಗೆ ಜೀವಿಸುತ್ತಾರೋ ಏನು ಸಾಧಿಸುತ್ತಾರೋ ದೇವರೇ ಬಲ್ಲ ....


ಜೀವನದಲ್ಲಿ ಒಮ್ಮೆಯಾದರು ಮಲೆನಾಡಿಗೆ ಭೇಟಿ ಕೊಡಿ...
ಆ ಹಸಿರು ಸಿರಿಯಲಿ ನಿಮ್ಮ ಮನಸ್ಸು ಮೆರೆಯುವಂತಾಗಲಿ....